ದಕ್ಷಿಣ ಕೊರಿಯ ಪ್ರಜಾಪ್ರಭುತ್ವ ಪರ ಹೋರಾಟದಲ್ಲಿ ಮೇರು ವ್ಯಕ್ತಿಯಾದ ಮಾಜಿ ಅಧ್ಯಕ್ಷ ಕಿಂ ಡೆ ಜಂಗ್ ತಮ್ಮ 85ನೇ ವಯಸ್ಸಿನಲ್ಲಿ ಅಸುನೀಗಿದ್ದಾರೆ. ಕಮ‌್ಯೂನಿಸ್ಟ್ ಉತ್ತರ ಕೊರಿಯ ಜತೆ ಹೊಂದಾಣಿಕೆಗೆ ಯತ್ನಿಸಿದ ಕಿಂ ಡೆ ಜಂಗ್ ಅವರಿಗೆ 2000ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿತ್ತು. ಕಿಮ್ ಅವರಿಗೆ ನ್ಯುಮೋನಿಯ ಕಾಯಿಲೆಗೆ ಚಿಕಿತ್ಸೆ ನೀಡುತ್ತಿದ್ದ ಸೋಲ್ ಆಸ್ಪತ್ರೆ ಅಧಿಕಾರಿ ಅವರ ಸಾವನ್ನು ದೃಢಪಡಿಸಿದ್ದಾರೆ.
ಸ್ಥಳೀಯ ಮಾಧ್ಯಮದ ವರದಿಗಳಲ್ಲಿ ಅವರು ಹೃದಯಾಘಾತದಿಂದ ಸತ್ತಿದ್ದಾರೆಂದು ಹೇಳಿದೆ. ಮಾಜಿ ರಾಜಕೀಯ ಕೈದಿಯಾದ ಕಿಂ ತಮ್ಮ ಮೊದಲಕ್ಷರದಿಂದ ಡಿಜೆ ಎಂದು ಜನಪ್ರಿಯರಾಗಿದ್ದು, 1997ರಲ್ಲಿ ದಕ್ಷಿಣ ಕೊರಿಯದ ಅಧ್ಯಕ್ಷರಾಗಿ ಆಯ್ಕೆಯಾದರು. ಆಡಳಿತರೂಢ ಅಧ್ಯಕ್ಷರಿಂದ ಪ್ರತಿಪಕ್ಷದ ಅಧ್ಯಕ್ಷರಿಗೆ ಮೊದಲಬಾರಿಗೆ ಅಧಿಕಾರ ವರ್ಗಾವಣೆಯಾಗಿದ್ದರ ಸಂಕೇತವೆಂದು ಅವರ ಜಯವನ್ನು ವರ್ಣಿಸಲಾಗಿತ್ತು.
ಅಂತಾರಾಷ್ಟ್ರೀಯವಾಗಿ ಕಿಮ್ ಉತ್ತರ ಕೊರಿಯದ ನಾಯಕ ಕಿಂ ಜಾಂಗ್ ಇಲ್ ಅವರ ಜತೆ ಐತಿಹಾಸಿಕ ಹಸ್ತಲಾಘವ ಮತ್ತು ಆಲಂಗನೆಗೆ ಹೆಸರಾಗಿದ್ದರು. ಸನ್‌ಶೈನ್ ನೀತಿಯ ಫಲವಾಗಿ ಉಭಯ ನಾಯಕರ ಭೇಟಿ ನಡೆದಿದ್ದು, ಕಿಂ ಅವರು ಇದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಆದರೆ ಸ್ವದೇಶದಲ್ಲಿ ದಕ್ಷಿಣ ಕೊರಿಯದ ದಮನಕಾರಿ ನೀತಿಯ ಆಡಳಿತದ ವಿರುದ್ಧ ಅವರ ಜೀವಮಾನಪರ್ಯಂತ ಹೋರಾಟದಿಂದ ಅವರ ಹೆಸರು ಮನೆಮಾತಾಯಿತು ಮತ್ತು ತಲೆಮಾರುಗಳಿಗೆ ಸ್ಫೂರ್ತಿ ನೀಡಿತು.