ಅಮೆರಿಕದ ಪೌರನನ್ನು ಬಿಡುಗಡೆ ಮಾಡುವ ಮ್ಯಾನ್ಮಾರ್ ಸರ್ಕಾರದ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಒಬಾಮಾ ಶ್ಲಾಘಿಸಿದ್ದಾರೆ. ಅದೇ ಗಳಿಗೆಯಲ್ಲಿ ಎಲ್ಲ ರಾಜಕೀಯ ಕೈದಿಗಳನ್ನು ಮತ್ತು ಪ್ರಜಾಪ್ರಭುತ್ವ ಪರ ಕಣ್ಮಣಿ ಆಂಗ್ ಸಾನ್ ಸೂಕಿ ಅವರನ್ನು ಬಿಡುಗಡೆ ಮಾಡಬೇಕೆಂದು ಅವರು ಮಿಲಿಟರಿ ನಾಯಕತ್ವ ಜುಂಟಾಗೆ ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರೀಯ ಲೀಗ್ ನಾಯಕಿ ಸೂಕಿ ಕಳೆದ 14 ವರ್ಷಗಳಿಂದ ಗೃಹಬಂಧನದಲ್ಲಿದ್ದು, ನೊಬೆಲ್ ಪುರಸ್ಕೃತರಾಗಿ ಸೆರೆಯಲ್ಲಿರುವ ಏಕೈಕ ವ್ಯಕ್ತಿ ಅವರಾಗಿದ್ದಾರೆ. ಮ್ಯಾನ್ಮಾರ್ ಜುಂಟಾ ಮುಖ್ಯಸ್ಥ ಥಾನ್ ಶಾ ಜತೆ ಸೆನೆಟರ್ ಜಿಮ್ ವೆಬ್ ಮಹತ್ವದ ಮಾತುಕತೆ ನಡೆಸಿದ ಬಳಿಕ ಅಮೆರಿಕದ ಪೌರ ಜಾನ್ ಎಟ್ಟಾವ ಅವರನ್ನು ಬಿಡುಗಡೆ ಮಾಡಿರುವ ಕುರಿತು ಅದ್ಯಕ್ಷರು ಸಂತುಷ್ಠರಾಗಿದ್ದಾರೆ.
ಬರ್ಮ ಸರ್ಕಾರದ ನಿರ್ಧಾರಕ್ಕೆ ಅವರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಬರ್ಮದ ನಾಯಕತ್ವ ಇದೇ ಮನೋಭಾವದಿಂದ ಸೂಕಿ ಸೇರಿದಂತೆ ಎಲ್ಲ ರಾಜಕೀಯ ಕೈದಿಗಳನ್ನು ಬಂಧನದಿಂದ ಅಥವಾ ಗೃಹಬಂಧನದಿಂದ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುವುದಾಗಿ ಹೇಳಿಕೆ ತಿಳಿಸಿದೆ.