ಅಂಡಮಾನ್ ದ್ವೀಪಗಳಿಂದ ವಶಪಡಿಸಿಕೊಂಡ ಉತ್ತರಕೊರಿಯ ಹಡಗನ್ನು ಆಂದ್ರಪ್ರದೇಶದ ಕಾಕಿನಾಡ ಬಂದರಿಗೆ ವಾಪಸು ತರಲಾಗಿದೆ. ಬಂದರಿನಲ್ಲಿ ಅಣ್ವಸ್ತ್ರ ವಿಜ್ಞಾನಿಗಳು ಮತ್ತು ಕೇಂದ್ರ ಭದ್ರತಾ ಸಂಸ್ಥೆಗಳು ಹಡಗಿನಲ್ಲಿ ವ್ಯಾಪಕ ಶೋಧ ನಡೆಸಲಿದೆ. ಹಡಗಿನ 39 ಮಂದಿ ಸಿಬ್ಬಂದಿಯ ಜತೆ ಸರ್ಕಾರಿ ಅಧಿಕಾರಿಯೊಬ್ಬರನ್ನು ಬಂದರಿನಲ್ಲೇ ತನಿಖೆಗೆ ಒಳಪಡಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.
ಎಂವಿ ಮು ಸಾನ್ ಹಡಗು ಇರಾಕ್ ಕಡೆಗೆ ತೆರಳುತ್ತಿತ್ತೆಂದು ಹೇಳಲಾಗಿದೆ. ವಾಣಿಜ್ಯೋದ್ದೇಶದ ಹಡಗಿನಲ್ಲಿ ಸರ್ಕಾರಿ ಅಧಿಕಾರಿಯ ಉಪಸ್ಥಿತಿಯಿಂದ ಅನುಮಾನ ಹುಟ್ಟಿಸಿದೆಯೆಂದು ಮೂಲಗಳು ತಿಳಿಸಿವೆ. ಆದರೆ ಕೊರಿಯ ದುಬಾಷಿ ಲಭ್ಯತೆಯ ಕೊರತೆಯಿಂದ ಸಿಬ್ಬಂದಿಯನ್ನು ಪ್ರಶ್ನಿಸುವುದು ವಿಳಂಬವಾಯಿತೆಂದು ಅವು ತಿಳಿಸಿವೆ. ಮಹಿಳಾ ದುಭಾಷಿಯೊಬ್ಬರನ್ನು ವಿದೇಶಾಂಗ ಸಚಿವಾಲಯವು ರವಾನಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸ್ಥಳೀಯ ದುಬಾಷಿಯ ನೆರವಿನಿಂದ ಹಡಗಿನ ನಾಯಕನ ಜತೆ ಆರಂಭದ ಸುತ್ತಿನ ಮಾತುಕತೆಯಲ್ಲಿ ಹಡಗು 16,500 ಟನ್ ಸಕ್ಕರೆ ಸಾಗಿಸುತ್ತಿದ್ದು, ಥಾಯ್ಲೆಂಡ್‌ನಲ್ಲಿ ಸಕ್ಕರೆ ತುಂಬಿಸಿದ ಬಳಿಕ ಇರಾಕ್ ಕಡೆ ತೆರಳುತ್ತಿತ್ತೆಂದು ಮೂಲಗಳು ತಿಳಿಸಿವೆ. ಹರಕುಮುರುಕು ಇಂಗ್ಲೀಷಿನಲ್ಲಿ ಮಾತನಾಡಿದ ಕ್ಯಾಪ್ಟನ್, ಹಡಗಿನಲ್ಲಿ ತಾಂತ್ರಿಕ ದೋಷವುಂಟಾಗಿ ತಾವು ಪಿಸ್ಟನ್ ಬದಲಾಯಿಸಬೇಕಾಯಿತು ಮತ್ತು ಇನ್ನೂ ಕೆಲವು ತಾಂತ್ರಿಕ ಕೆಲಸಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.