ನಮ್ಮ ರಾಷ್ಟ್ರದಲ್ಲಿ ನೆಲೆ ಹೊಂದಿರುವ ಭಯೋತ್ಪಾದಕ ಗುಂಪುಗಳು ಭಾರತದ ಮೇಲೆ ಹೊಸ ದಾಳಿಗಳನ್ನು ನಡೆಸಲು ಯೋಜಿಸಿದೆಯೆಂಬ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಪ್ರತಿಕ್ರಿಯೆಯನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲವೆಂದು ಪಾಕಿಸ್ತಾನ ಮಂಗಳವಾರ ತಿಳಿಸಿದೆ. ಭಾರತದ ಪ್ರಧಾನಿ ಇಂತಹ ಮಾತುಗಳನ್ನು ಹೇಳಿದ ಮೇಲೆ ನಾವು ಹಗುರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ವಿದೇಶಾಂಗ ಸಚಿವ ಶಾ ಮೊಹಮದ್ ಖುರೇಷಿ ಇಸ್ಲಾಮಾಬಾದ್‌ನ ಅಧಿಕೃತ ಸಮಾರಂಭದ ನೇಪಥ್ಯದಲ್ಲಿ ತಿಳಿಸಿದರು.
ಇಂತಹ ಮಾಹಿತಿ ಭಾರತದ ಬಳಿ ಇದ್ದರೆ ಅದನ್ನು ಪಾಕಿಸ್ತಾನದ ಜತೆ ಹಂಚಿಕೊಂಡರೆ ನಾವು ಪೂರ್ವಭಾವಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಭಯೋತ್ಪಾದನೆ ಗುಂಪುಗಳಿಂದ ಹೊಸ ದಾಳಿಗಳನ್ನು ನಡೆಸುವ ಸಂಚಿನ ಬಗ್ಗೆ ನಮಗೆ ವಿಶ್ವಾಸಾರ್ಹ ಮಾಹಿತಿ ಸಿಕ್ಕಿದೆಯೆಂದು ಸಿಂಗ್ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.
ಭಾರತದ ಜತೆ ಲಭ್ಯವಿರುವ ಯಾವುದೇ ಭಯೋತ್ಪಾದನೆ ಬೆದರಿಕೆಗಳನ್ನು ಕುರಿತು ವಿಶ್ವಾಸಾರ್ಹ ಮಾಹಿತಿ ಬಗ್ಗೆ ಪಾಕಿಸ್ತಾನದ ಜತೆ ಹಂಚಿಕೊಳ್ಳಬೇಕೆಂದು ಖುರೇಷಿ ತಿಳಿಸಿದ್ದಾರೆ. ಉಭಯ ರಾಷ್ಟ್ರಗಳ ಪ್ರಧಾನಮಂತ್ರಿಗಳು ಈಜಿಪ್ಟ್‌ನಲ್ಲಿ ನಡೆದ ಭೇಟಿಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಎರಡೂ ಕಡೆಯವರು ಪರಸ್ಪರ ಸಹಕರಿಸಬೇಕೆಂದು ನಿರ್ಧರಿಸಿದ್ದನ್ನು ಖುರೇಷಿ ನೆನಪಿಸಿದರು.