ಆಫ್ಘಾನಿಸ್ತಾನದಲ್ಲಿ ಚುನಾವಣೆಗೆ ಇನನು ಎರಡು ದಿನಗಳು ಬಾಕಿವುಳಿದಂತೆ ಭಯೋತ್ಪಾದಕರು ತಮ್ಮ ಅಟ್ಟಹಾಸ ಮೆರೆದಿದ್ದು, ಕಾಬೂಲ್ ಹೊರವಲಯದಲ್ಲಿ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಮೂವರು ನಾಗರಿಕರು ಮಂಗಳವಾರ ಹತರಾಗಿದ್ದಾರೆ. ಗಾಯಗೊಂಡರವಲ್ಲಿ ಮೂವರು ವಿಶ್ವಸಂಸ್ಥೆ ಸಿಬ್ಬಂದಿ ಕೂಡ ಸೇರಿದ್ದಾರೆ.
ದಾಳಿಯಲ್ಲಿ 21 ಜನರು ಗಾಯಗೊಂಡಿದ್ದಾರೆಂದು ರಕ್ಷಣಾ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ. ಬಾಗ್ರಾಂನ ಅಮೆರಿಕದ ದೊಡ್ಡ ನೆಲೆಗೆ ಕಾಬೂಲ್‌ನಿಂದ ಸಂಪರ್ಕಿಸುವ ರಸ್ತೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ವಿಶ್ವಸಂಸ್ಥೆಯ ಮೂವರು ಆಫ್ಘನ್ ಸಿಬ್ಬಂದಿ ಗಾಯಗೊಂಡಿದ್ದಾರೆಂದು ವಕ್ತಾರ ಅಲೀಂ ಸಿದ್ಧಿಖಿ ತಿಳಿಸಿದ್ದಾರೆ.
ಸಿಬ್ಬಂದಿ ಚಾಲನೆ ಮಾಡುತ್ತಿದ್ದ ವಿಶ್ವಸಂಸ್ಥೆಯ ವಾಹನವನ್ನು ದಾಳಿಗೆ ಗುರಿಮಾಡಲಾಗಿತ್ತೆಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲವೆಂದು ಸಿದ್ಧಿಖಿ ಹೇಳಿದ್ದಾರೆ.ಗುರುವಾರ ಅಧ್ಯಕ್ಷೀಯ ಚುನಾವಣೆ ನಡೆಯಲಿರುವುದರಿಂದ ಅಮೆರಿಕ, ನ್ಯಾಟೊ ಮತ್ತು ಆಫ್ಘನ್ ಭದ್ರತಾಪಡೆಗಳು ತೀವ್ರ ಕಟ್ಟೆಚ್ಚರದಲ್ಲಿವೆ. ತಾಲಿಬಾನ್ ಉಗ್ರಗಾಮಿಗಳು ಚುನಾವಣೆಗೆ ಅಡ್ಡಿಪಡಿಸುವ ಬೆದರಿಕೆ ಹಾಕಿರುವ ನಡುವೆ, ಲಕ್ಷಾಂತರ ಆಫ್ಘನ್ನರು ಗುರುವಾರ ಅಧ್ಯಕ್ಷ ಮತ್ತು ಪ್ರಾಂತೀಯ ಮಂಡಳಿ ಚುನಾವಣೆಗೆ ಮತ ಚಲಾಯಿಸಲಿದ್ದಾರೆ.