ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಟುನಿಸಿಯದ ಮಹಿಳೆಯೊಬ್ಬರು 12 ಮಕ್ಕಳಿಗೆ ಜನ್ಮನೀಡಲಿರುವ ಮಹಾತಾಯಿಯಾಗಿದ್ದಾರೆ. ಎರಡು ಬಾರಿ ಗರ್ಭಪಾತ ಅನುಭವಿಸಿದ್ದ ಗರ್ಭಿಣಿ ಶಿಕ್ಷಕಿ ಮತ್ತು ಅವರ ಪತಿ ಸಂತಾನ ಚಿಕಿತ್ಸೆಯ ಮೂಲಕ ಸಾಧಿಸಿದ ಗರ್ಭದ ಬಗ್ಗೆ ಉತ್ಸುಕರಾಗಿದ್ದು, ದಂಪತಿ 6 ಗಂಡುಮಕ್ಕಳು ಮತ್ತು 6 ಹೆಣ್ಣುಮಕ್ಕಳನ್ನು ನಿರೀಕ್ಷಿಸಿದ್ದಾರೆಂದು ಮಾಧ್ಯಮ ವರದಿ ಮಾಡಿದೆ.
ಗಾಫ್ಸಾ ತವರುಪಟ್ಟಣದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಪತಿ ಮಾರ್ವಾನ್, ಇದೊಂದು ಆಶ್ಚರ್ಯಕರ ಮತ್ತು ಅದ್ಭುತ ಪವಾಡವೆಂದು ಹೇಳಿದ್ದಾರೆ. ಆರಂಭದಲ್ಲಿ ತಮ್ಮ ಪತ್ನಿ ಅವಳಿಗಳಿಗೆ ಜನ್ಮ ನೀಡಬಹುದೆಂದು ಭಾವಿಸಿದೆವು. ಆದರೆ ಇನ್ನಷ್ಟು ಭ್ರೂಣಗಳು ಪತ್ತೆಯಾಗಿದ್ದರಿಂದ ನಾವು ಸಂತೋಷದಿಂದ ಹಿಗ್ಗಿದ್ದಾಗಿ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಆದರೆ ಸಂತಾನ ತಜ್ಞರು ಈ ಸುದ್ದಿಯನ್ನು ಖಂಡಿಸಿದ್ದು, ದಂಪತಿಗೆ ಚಿಕಿತ್ಸೆ ನೀಡಿದವರು ಹೊಣೆಗೇಡಿಗಳಾಗಿದ್ದು, ತಾಯಿ ಮತ್ತು ಮಕ್ಕಳ ಜೀವಕ್ಕೆ ಮತ್ತು ಆರೋಗ್ಯಕ್ಕೆ ಅಪಾಯ ತಂದೊಡ್ಡಿದ್ದಾರೆಂದು ಆರೋಪಿಸಿದ್ದಾರೆ.
ಆಕ್ಸಫರ್ಡ್ ವಿವಿ ಸಂತಾನ ತಜ್ಞ ಸೈಮನ್ ಫಿಷರ್ 12 ಮಕ್ಕಳಿಗೆ ಜನ್ಮ ನೀಡುವ ಪ್ರಕ್ರಿಯೆ ಭಯಾನಕವಾಗಿದ್ದು, ಇದರಲ್ಲಿ ಒಳಗೊಂಡ ವೈದ್ಯರು ಸಂಪೂರ್ಣ ಬೇಜವಬ್ದಾರಿಯಿಂದ ಅವಕಾಶ ನೀಡಿದ್ದಾರೆಂದು ಟೀಕಿಸಿದ್ದಾರೆ. ಗರ್ಭಧಾರಣೆ ಸುಖಾಂತ್ಯಗೊಳ್ಳುವ ಅವಕಾಶ ಕಡಿಮೆ. ಎಲ್ಲರೂ ಬದುಕುಳಿಯುವ ಅವಕಾಶವೂ ಇಲ್ಲ. ಬದುಕುಳಿದರೂ ಸಮಸ್ಯೆಗಳಿಗೆ ಸಿಲುಕುವ ಸಂಭವವಿದೆಯೆಂದು ಅವರು ಹೇಳಿದ್ದಾರೆ.