ಆಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆ ಆಫ್ಘನ್ ರಾಜಧಾನಿಯ ಹೃದಯಭಾಗದಲ್ಲಿ ಬುಧವಾರ ಗುಂಡಿನಕಾಳಗ ಮತ್ತು ಸ್ಫೋಟಗಳು ಅಪ್ಪಳಿಸಿದವು. ಮೂವರು ಉಗ್ರಗಾಮಿಗಳು ಎಕೆ-47 ಬಂದೂಕುಗಳನ್ನು ಮತ್ತು ಕೈಗ್ರೆನೇಡ್‌ಗಳನ್ನು ಹಿಡಿದು ಬ್ಯಾಂಕೊಂದಕ್ಕೆ ಮುತ್ತಿಗೆ ಹಾಕಿದ ಬಳಿಕ ಪೊಲೀಸರು ಕಟ್ಟಡವನ್ನು ಸುತ್ತುವರಿದು ಮೂವರು ಉಗ್ರರನ್ನು ಹತ್ಯೆ ಮಾಡಿದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಟೊದ ಕಾಬೂಲ್ ಮುಖ್ಯಕಚೇರಿ ಎದುರು ಕಾರ್ ಬಾಂಬ್ ಸ್ಫೋಟದ ಹಿಂದೆಯೇ ಉಗ್ರಗಾಮಿಗಳು ಅಧ್ಯಕ್ಷರ ಅರಮನೆ ಮೇಲೆ ರಾಕೆಟ್‌ಗಳಿಂದ ದಾಳಿ ಮಾಡಿದ ಮರುದಿನವೇ ಮೂವರು ಉಗ್ರರ ದಾಳಿ ನಡೆದಿದೆ. ಈ ದಾಳಿಗಳು ಗುರುವಾರದ ಮತದಾನ ಅಡ್ಡಿಪಡಿಸುವ ತಾಲಿಬಾನ್ ಉಗ್ರರ ಇಚ್ಛೆಯನ್ನು ಜಾಹೀರುಮಾಡಿದೆ.
ಚುನಾವಣೆಯಲ್ಲಿ ಅಧ್ಯಕ್ಷ ಕರ್ಜೈ ಅವರು ಸುಮಾರು 3 ಡಜನ್ ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಎದುರಿಸುತ್ತಿದ್ದು, ಅವರಲ್ಲಿ ಮಾಜಿ ವಿದೇಶಾಂಗ ಸಚಿವ ಮತ್ತು ತೀವ್ರ ಪ್ರತಿಸ್ಪರ್ಧಿ ಅಬ್ದುಲ್ಲಾ ಅಬ್ದುಲ್ಲಾ ಕೂಡ ಸೇರಿದ್ದಾರೆ.ಗುರುವಾರದ ಚುನಾವಣೆಗೆ ಕೇವಲ 24 ಗಂಟೆಗಳು ಬಾಕಿವುಳಿದಿದ್ದರೂ ಶೇ.20ರಷ್ಟು ಚುನಾವಣೆ ಸಾಮಗ್ರಿಗಳು ಮತಗಟ್ಟೆಗಳಿಗೆ ರವಾನೆಯಾಗದೇ ಇರುವುದು ಆಫ್ಙಾನಿಸ್ತಾನದಲ್ಲಿ ಚುನಾವಣೆಗೆ ಸಿದ್ಧತೆ ನಡೆಸುವುದು ಕಷ್ಟವಾಗಿದ್ದರ ಸಂಕೇತವಾಗಿದೆ.