ಶರಿಯತ್ ಕಾನೂನಿನಲ್ಲಿ ಬಿಯರ್ ಹೀರುವುದು ಕೂಡ ಅಪರಾಧ. ಈ ಅಪರಾಧದಲ್ಲಿ ಸಿಕ್ಕಿಬಿದ್ದ ಅರೆಕಾಲಿಕ ಮುಸ್ಲಿಂ ರೂಪದರ್ಶಿ ಮುಂದಿನ ವಾರ ಮಲೇಶಿಯದಲ್ಲಿ 6 ಛಡಿಯೇಟಿನ ಶಿಕ್ಷೆಗೆ ಗುರಿಯಾಗಲಿದ್ದಾರೆ. ಮಹಿಳೆ ಮುಸ್ಲಿಂ ಧರ್ಮಕ್ಕೆ ವಿರುದ್ಧವಾಗಿ ಮಧ್ಯಪಾನ ಮಾಡಿದ್ದು ಘೋರತಪ್ಪೆಂದು ಭಾವಿಸಲಾಗಿದ್ದು, ಕಾರ್ತಿಕಾ ಸಾರಿ ದೇವಿ ಶುಕರ್ನೊ ವಿರುದ್ಧ ಶರಿಯ ಕೋರ್ಟ್ ಬಂಧನದ ವಾರಂಟ್ ಜಾರಿ ಮಾಡಿದೆ.
ಹೊಟೆಲ್ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮಹಿಳೆ ಆಲ್ಕೊಹಾಲ್ ಹೀರುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಸಾರ್ವಜನಿಕ ಸ್ಥಳದಲ್ಲಿ ತಾವು ಆಲ್ಕೊಹಾಲ್ ಕುಡಿದಿದ್ದಾಗಿ ತಪ್ಪುಒಪ್ಪಿಕೊಂಡ ಕಾರ್ತಿಕಾರನ್ನು ಮಹಿಳೆಯರ ಬಂಧೀಖಾನೆಯಲ್ಲಿ ಒಂದು ವಾರದವರೆಗೆ ಇರಿಸಲಾಗುವುದು ಮತ್ತು ಶಿಕ್ಷೆ ಜಾರಿಯಾದ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಪೂರ್ವ ಪೆಹಾಂಗ್‌ನ ಶರಿಯ ಕೋರ್ಟ್ ತಿಳಿಸಿದೆ.
ಜೈಲಿನ ನಿರ್ದೇಶಕರಿಂದಲೇ ಕಾರ್ತಿಕಾರಿಗೆ ಛಡಿಯೇಟಿನ ಶಿಕ್ಷೆ ಬೀಳಲಿದ್ದು, ಶಿಕ್ಷೆ ಜಾರಿಯಾದ ಮೇಲೆ ಕಾರ್ತಿಕಾರನ್ನು ಬಿಡುಗಡೆ ಮಾಡಲಾಗುವುದೆಂದು ನ್ಯಾಯಾಧೀಶರು ತಿಳಿಸಿದರು. ಇಸ್ಲಾಂನಲ್ಲಿ ಮಧ್ಯಪಾನ ಸೇವನೆ ನಿಷೇಧಿಸಲಾಗಿದ್ದು, ಮದ್ಯಪಾನ ಮಾಡಿದ ತಪ್ಪಿಗೆ ಕಾರ್ತಿಕಾ ಶರಿಯತ್ ಛಡಿಯೇಟು ತಿನ್ನುತ್ತಿರುವ ದೇಶದಲ್ಲೇ ಪ್ರಥಮ ಮಹಿಳೆಯಾಗಿದ್ದಾರೆ.