ರಾಜಕಾರಣಿಯಾಗಿ ಪರಿವರ್ತನೆಯಾದ ಪಾಕಿಸ್ತಾನ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಮಾಜಿ ಪ್ರಧಾನಮಂತ್ರಿ ಬೆನಜೀರ್ ಭುಟ್ಟೊ ಜತೆ ಆಕ್ಸ್ಫರ್ಡ್ ವಿವಿಯಲ್ಲಿ ಓದುವಾಗ ಅನುರಕ್ತರಾಗಿದ್ದರೆಂದು ಇಮ್ರಾನ್ ಖಾನ್ ಅವರ ಜೀವನಚರಿತ್ರೆಯಲ್ಲಿ ಲೇಖಕರು ಬರೆದಿದ್ದಾರೆ. ಖಾನ್ ಬಗ್ಗೆ ಆಕರ್ಷಿತರಾಗಿದ್ದ ಬೆನಜೀರ್ ಅತೀ ಸಾಮೀಪ್ಯದ ಸಂಬಂಧ ಹೊಂದಿದ್ದರೆಂದು ಕ್ರಿಸ್ಟೊಫರ್ ಸ್ಯಾಂಡ್ಫೋರ್ಡ್ ಬರೆದಿದ್ದಾರೆ.
ಇವರಿಬ್ಬರು ಜೋಡಿಗಳ ನಡುವೆ ವ್ಯವಸ್ಥಿತ ವಿವಾಹ ಆಯೋಜಿಸಲು ಖಾನ್ ತಾಯಿ ನಿರ್ಧರಿಸಿದ್ದರೂ ಅದು ನಿಷ್ಫಲವಾಯಿತೆನ್ನಲಾಗಿದೆ. ಖಾನ್ ಮತ್ತು ಭುಟ್ಟೊ ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಜಟಾಪಟಿಯಲ್ಲಿದ್ದರೆಂದು ನಂಬಲಾಗಿದೆ. ವಾಸ್ತವವಾಗಿ ಬೆನಜೀರ್ ಸಾವಿಗೆ ಕೆಲವೇ ದಿನಗಳ ಮುಂಚೆ ಖಾನ್ ಅವರು ಬೆನಜೀರ್ ಅವರನ್ನು ಬಹಿರಂಗವಾಗಿ ಟೀಕಿಸಿದ್ದರು.
ಕೃತಿರಚನೆ ಸಲುವಾಗಿ ಖಾನ್ ಮತ್ತು ಅವರ ಮಾಜಿ ಪತ್ನಿ ಜೆಮಿಮ ಅವರನ್ನು ಸಂದರ್ಶನ ಮಾಡಿದ್ದ ಸ್ಯಾಂಡ್ಫೋರ್ಡ್ಗೆ 1975ರಲ್ಲಿ ಭುಟ್ಟೊ ಅವರು ಲೇಡಿ ಮಾರ್ಗರೇಟ್ ಹಾಲ್ನಲ್ಲಿ ರಾಜಕೀಯ ವಿಷಯದ ಎರಡನೇ ವರ್ಷದಲ್ಲಿ ಕಲಿಯುವಾಗ ಖಾನ್ ಜತೆ ಆಪ್ತತೆ ಹೊಂದಿದ್ದರೆಂದು ಮೂಲವೊಂದು ತಿಳಿಸಿದ್ದಾಗಿ ಬರೆದಿದ್ದಾರೆ.
ಆದರೆ ಲೇಖಕರ ವಾದವನ್ನು ಪಾಕಿಸ್ತಾನದ ಕ್ರಿಕೆಟ್ ಮಾಜಿ ನಾಯಕ ಅಲ್ಲಗಳೆದಿದ್ದು, ಭುಟ್ಟೊ ಜತೆ ಯಾವುದೇ ಸಂಬಂಧ ಹೊಂದಿಲ್ಲವೆಂದು ತಿಳಿಸಿದ್ದಾರೆ. ನಾವು ಕೇವಲ ಸ್ನೇಹಿತರಾಗಿದ್ದೇವೆಯೇ ಹೊರತು ಯಾವುದೇ ಸಂಬಂಧವಿದ್ದದ್ದು ಅಸಂಬದ್ಧ ಮತ್ತು ತಮ್ಮ ತಾಯಿ ವಿವಾಹದ ಪ್ರಸ್ತಾಪ ಮಾಡಲೂ ಇಲ್ಲವೆಂದು ಅವರು ಹೇಳಿದ್ದಾರೆ.