ಭಾರತದ ತಾಂತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಶ್ಲಾಘಿಸಿದ್ದು, ಈ ಕ್ಷೇತ್ರದಲ್ಲಿ ರಾಷ್ಟ್ರ ಅಗ್ರಸ್ಥಾನವನ್ನು ಗಳಿಸಿದೆಯೆಂದು ನಂಬಿದ್ದಾರೆ. ಅದೇ ಗಳಿಗೆಯಲ್ಲಿ ಲಕ್ಷಾಂತರ ಮಕ್ಕಳಿಗೆ ಸೂಕ್ತ ಪ್ರಾಥಮಿಕ ಶಿಕ್ಷಣ ಒದಗಿಸುವ ಸವಾಲನ್ನು ಭಾರತ ಎದುರಿಸುತ್ತಿದೆಯೆಂದು ತಿಳಿಸಿದ್ದಾರೆ.
ಭಾರತದ ತಾಂತ್ರಿಕ ಶಿಕ್ಷಣ ವಿಶ್ವದಲ್ಲೇ ಅತ್ಯುತ್ತಮವಾಗಿದ್ದು, ಇದು ಅಸೂಯೆ ಪಡುವಂತಿದೆಯೆಂದು ಕ್ಲಿಂಟನ್ ತಮ್ಮ ಇತ್ತೀಚಿನ ಭೇಟಿಯಲ್ಲಿ ಹೇಳಿದ್ದಾರೆ. ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಕ್ಲಿಂಟನ್ ಪ್ರತಿಕ್ರಿಯಿಸುತ್ತಾ ಮೇಲಿನಂತೆ ತಿಳಿಸಿದ್ದಾರೆ. ಕೆಲವು ಆಯ್ದ ಪ್ರಶ್ನೆಗಳಿಗೆ ಅಮೆರಿಕದ ರಾಜತಾಂತ್ರಿಕರು ನೀಡಿದ ಉತ್ತರಗಳು ವಿದೇಶಾಂಗ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಭಾರತದ ಲಕ್ಷಾಂತರ ಮಕ್ಕಳಿಗೆ ಸೂಕ್ತ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಅಥವಾ ಕಾಲೇಜು ಶಿಕ್ಷಣದ ಸೌಲಭ್ಯವಿಲ್ಲವೆಂದು ಹೇಳಿದ್ದಾರೆ. ಮುಂಬೈಗೆ ತಮ್ಮ ಪ್ರವಾಸವನ್ನು ಉಲ್ಲೇಖಿಸಿ ಟೀಚ್ ಇಂಡಿಯ ಮತ್ತು ಟೀಚ್ ಫಾರ್ ಇಂಡಿಯ ಕಾರ್ಯಕರ್ತರ ಜತೆ ಶಿಕ್ಷಣ ಕುರಿತು ಚರ್ಚಿಸಿದ ಅವರು, ಕಾರ್ಯಕರ್ತರು ಪ್ರತಿಯೊಂದು ಮಗುವಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುವ ಬಗ್ಗೆ ಮಾತನಾಡಿದಾಗ ಅವರ ಮುಖಗಳಲ್ಲಿ ಸೇವಾಕಾಂಕ್ಷೆಯ ಛಾಯೆ ಮೂಡಿತ್ತೆಂದು ಅವರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಜನರು ಸೂಕ್ತ ಮೂಲಸೌಲಭ್ಯವಿಲ್ಲದೇ ವಾಸಿಸಬೇಕಾದ ಸವಾಲನ್ನು ಭಾರತ ಎದುರಿಸುತ್ತಿದ್ದು, ಅಗತ್ಯವಿರುವ ಶಾಲೆಗಳನ್ನು ಸ್ಥಾಪಿಸುವುದು, ನಿಷ್ಠ ಶಿಕ್ಷಕರು, ಪಠ್ಯಗಳು ಮತ್ತು ಸಾಮಗ್ರಿಗಳನ್ನು ಒದಗಿಸುವಿಕೆ ಹೇಗೆ ನಿಭಾಯಿಸುವುದೆಂದು ಪರಿಶೀಲಿಸಬೇಕೆಂದು ಹೇಳಿದ್ದಾರೆ.