15 ವರ್ಷ ವಯಸ್ಸಿನಲ್ಲೇ ಸರಣಿ ಹತ್ಯೆಗಳನ್ನು ನಡೆಸಲು ಆರಂಭಿಸಿದ್ದಾಗಿ ಬ್ರೆಜಿಲ್‌ನ 17 ವರ್ಷ ವಯಸ್ಸಿನ ಶಾಲಾ ಬಾಲಕಿ ಒಪ್ಪಿಕೊಳ್ಳುವ ಮೂಲಕ ಪೊಲೀಸರನ್ನು ಚಕಿತಗೊಳಿಸಿದ್ದಾಳೆ. ಸುಮಾರು 30 ಜನರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಆರೋಪದ ಮೇಲೆ ಸೋಮವಾರ ಆಕೆಯನ್ನು ಬಂಧಿಸಲಾಗಿದೆ. ತಾನು 18 ವಯಸ್ಸು ತುಂಬುವುದಕ್ಕಿಂತ ಮುಂಚೆಯೇ ತಪ್ಪನ್ನು ಒಪ್ಪಿಕೊಳ್ಳಲು ಇಚ್ಛಿಸಿರುವುದಾಗಿ ಅವಳು ತನಿಖೆದಾರರಿಗೆ ತಿಳಿಸಿದ್ದಾಳೆ.
ಬಾಲಕಿ ಅಪ್ತಾಪ್ತ ವಯಸ್ಕಳಾದ್ದರಿಂದ ಅವಳ ಹೆಸರನ್ನು ಬಹಿರಂಗ ಮಾಡಿಲ್ಲ. ಸಾವೊ ಪಾಲೊದಲ್ಲಿರುವ ತನ್ನ ತವರುನಗರದಲ್ಲಿ ಹಣ, ಸೇಡು ಮತ್ತು ನ್ಯಾಯಕ್ಕಾಗಿ ಪುರುಷರ ಮೇಲೆ ತಾನು ದಾಳಿ ಮಾಡಲು ಆರಂಭಿಸಿದ್ದಾಗಿ ಬಾಲಕಿ ಹೇಳಿದ್ದಾಳೆ. 'ತನಗೆ ಬಂದೂಕನ್ನು ಹಿಡಿಯುವಷ್ಟು ಧೈರ್ಯವಿರಲಿಲ್ಲ ಮತ್ತು ಚೂರಿಯನ್ನು ಹಿಡಿಯಬಲ್ಲೆ' ಎಂದು ಬಾಲಕಿ ಹೇಳಿದ್ದಾಳೆ. ಆದರೆ ಪುರುಷರ ನಿರ್ದಯ ಸರಣಿ ಹತ್ಯೆಗೆ ಪ್ರೇರೇಪಣೆಯೇನು ಎನ್ನುವ ಬಗ್ಗೆ ಪೊಲೀಸರಿಗೆ ಇನ್ನೂ ಸ್ಪಷ್ಟವಾಗಿಲ್ಲ.
ಆಕೆ ಮುಗ್ಧಳಾಗಿ ಕಾಣುವುದರಿಂದ ಪಾತಕಿಗಳ ಮುಖಂಡರು ಅವಳನ್ನು ಹತ್ಯೆಕೋರಳಾಗಿ ನೇಮಕ ಮಾಡಿದ್ದರೆನ್ನುವುದು ಒಂದು ಸಿದ್ಧಾಂತವೆಂದು ಮೂಲಗಳು ತಿಳಿಸಿವೆ. ಸಾ ಪಾಲೊ ಬೀದಿ ಕಾಳಗದಲ್ಲಿ ಆಕೆ ಬಂಧಿತಳಾದ ಬಳಿಕ ಆಕೆಯ ರೋಮಾಂಚಕ ತಪ್ಪೊಪ್ಪಿಗೆ ಹೇಳಿಕೆ ಹೊರಬಿದ್ದಿದೆ.