ಯುದ್ಧಪೀಡಿತ ಇತಿಹಾಸ ಹೊಂದಿರುವ ಆಫ್ಘಾನಿಸ್ತಾನದಲ್ಲಿ ಗುರುವಾರ ಎರಡನೇ ಬಾರಿಗೆ ಅಧ್ಯಕ್ಷರ ಆಯ್ಕೆ ಸಲುವಾಗಿ ಚುನಾವಣೆ ನಡೆಯಲಿದ್ದು, ತಾಲಿಬಾನ್ ದಾಳಿಗಳ ಬೆದರಿಕೆ ತಡೆಯಲು ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಅಮೆರಿಕ ನೇತೃತ್ವದ ಆಕ್ರಮಣದಲ್ಲಿ ತಾಲಿಬಾನ್ ಕಾಲುಕಿತ್ತ 8 ವರ್ಷಗಳ ಬಳಿಕ ರಾಷ್ಟ್ರವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ದೃಢವಾಗಿ ಇರಿಸುವ ಗುರಿಯಿಂದ ನಡೆಸಲಾಗುತ್ತಿರುವ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ತಾಲಿಬಾನಿಗಳು ರಾಜಧಾನಿ ಕಾಬೂಲ್‌ನಲ್ಲಿ ತಮ್ಮ ಅಟ್ಟಹಾಸ ಮೆರೆದಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲಿತ ಅಧ್ಯಕ್ಷ ಹಮೀದ್ ಕರ್ಜೈ ಭರ್ಜರಿ ಬಹುಮತ ಸಾಧಿಸುವ ಭರವಸೆ ವ್ಯಕ್ತಪಡಿಸಿದ್ದು, ಚುನಾವಣೆ ದಿನ ಹಿಂಸಾಚಾರದ ವರದಿ ನೀಡುವುದನ್ನು ನಿಷೇಧಿಬೇಕೆಂದು ಆದೇಶಿಸಿದ್ದಾರೆ. ಇದಕ್ಕೆ ತಪ್ಪಿದ ಪತ್ರಕರ್ತರಿಗೆ ಭಾರೀ ದಂಡ ವಿಧಿಸುವ ಬೆದರಿಕೆಯನ್ನು ಹಾಕಲಾಗಿದೆ.
ಚುನಾವಣೆಯಲ್ಲಿ ನೀರಸ ಮತದಾನದಿಂದ ಚುನಾವಣೆಯ ವಿಶ್ವಾಸರ್ಹತೆ ಕುಂದುತ್ತದೆಂಬ ಶಂಕೆಯ ಮೇಲೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸುವಂತೆ ಅವರು ಜನತೆಗೆ ಮನವಿ ಮಾಡಿದ್ದಾರೆ.ಆದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವ ಬಗ್ಗೆ ಪಾಶ್ಚಿಮಾತ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಮತಗಳ ಖರೀದಿ ಮತ್ತಿತರ ವರದಿಗಳಿಂದ ಮುಕ್ತ ಚುನಾವಣೆ ನಡೆಯುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಆದರೆ ಮತದಾನಕ್ಕೆ ಅಡ್ಡಿಪಡಿಸಲು ತಾಲಿಬಾನಿಗಳ ದಾಳಿಗಳಿಂದ, ಸರ್ಕಾರದ ಮರುಭರವಸೆಗಳು ಮತ್ತು ಅಮೆರಿಕ ಮತ್ತು ಮಿತ್ರಪಡೆಗಳಿಂದ ಬಂಡುಕೋರ ನಿಗ್ರಹ ಕಾರ್ಯಾಚರಣೆ ತೀವ್ರತೆ ನಡುವೆಯೂ ಮತದಾನ ಸುರಕ್ಷಿತವಾಗಿ ನಡೆಯುವುದೇ ಎಂಬ ಶಂಕೆ ವ್ಯಕ್ತವಾಗಿದೆ.