ಅಮೆರಿಕದ ಸೇನಾ ನೇಮಕಾತಿ ಕಮಾಂಡ್‌ಗೆ ಈ ಮೇಲ್ ಸಂದೇಶ ಕಳಿಸಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಹತ್ಯೆಮಾಡುವುದಾಗಿ ಬೆದರಿಕೆ ಹಾಕಿದ ಪ್ಲೋರಿಡಾದ ವ್ಯಕ್ತಿಯೊಬ್ಬ ತನ್ನ ತಪ್ಪನ್ನು ಟಾಂಪಾ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದಾನೆ. ಇದಕ್ಕಾಗಿ ಅವನು ಫೆಡರಲ್ ಜೈಲಿನಲ್ಲಿ ಐದು ವರ್ಷಗಳ ಜೈಲುಶಿಕ್ಷೆ ಅನುಭವಿಸಲಿದ್ದಾನೆ. ಅಧ್ಯಕ್ಷೀಯ ಚುನಾವಣೆ ನಡೆದ ಮರುದಿನವೇ ಅಮೆರಿಕ ಸೇನಾ ನೇಮಕಾತಿ ಕಮಾಂಡ್‌ಗೆ ಬೆದರಿಕೆಯ ಈಮೇಲ್ ಸಂದೇಶ ಕಳಿಸಿರುವುದನ್ನು 21 ವರ್ಷ ವಯಸ್ಸಿನ ನಾಥನ್ ವೈನ್ ಒಪ್ಪಿಕೊಂಡಿದ್ದಾನೆ.
ವೈನ್ ತಾನು ಪತ್ರ ಕಳಿಸಿದ್ದಾಗಿ ಗುಪ್ತಸೇವೆ ಏಜೆಂಟರ ಮುಂದೆ ಒಪ್ಪಿಕೊಂಡಿದ್ದು, ಒಬಾಮಾ ಅವರನ್ನು ಹತ್ಯೆಗೈಯಲು ಯೋಜಿಸಿದ್ದಾಗಿ ತಿಳಿಸಿದ್ದಾನೆ.ಅಮೆರಿಕದ ಈ ನಿರಂಕುಶಾಧಿಕಾರಿಗೆ ಗುಂಡಿಕ್ಕಿ ಹೊಡೆಯುವ ತನಕ ತಾನು ವಿಶ್ರಮಿಸುವುದಿಲ್ಲವೆಂದು ಸೇನಾಕೇಂದ್ರಕ್ಕೆ ಕಳಿಸಿದ ಕಳಪೆ ಬರಹದ ಪತ್ರದಲ್ಲಿ ವೈನ್ ತಿಳಿಸಿದ್ದಾನೆ. ಡಿಸಿಯ ಬೀದಿಗಳಲ್ಲಿ ಒಬಾಮಾ ರಕ್ತ ಹರಿಯಲಿದೆಯೆಂದು ಅವನು ಪತ್ರದಲ್ಲಿ ತಿಳಿಸಿದ್ದಾನೆ.
ಶ್ವೇತಭವನದ ಪ್ರಥಮ ಕರಿಯಜನಾಂಗದ ಅಧ್ಯಕ್ಷರಾದ ಒಬಾಮಾ ಅಮೆರಿಕದ ಇತಿಹಾಸದಲ್ಲಿ ಅತೀ ಹೆಚ್ಚು ಜೀವಬೆದರಿಕೆಗೊಳಗಾದ ಅಧ್ಯಕ್ಷರಾಗಿದ್ದು, ಪ್ರತಿದಿನ ಕನಿಷ್ಠ 30 ಹತ್ಯೆ ಬೆದರಿಕೆಗಳನ್ನು ಸ್ವೀಕರಿಸಿದ್ದಾರೆ. ಜಾರ್ಜ್‌ಬುಷ್ ಅವರಿಗಿಂತ ಇದು ಶೇ.400ರಷ್ಟು ಹೆಚ್ಚೆಂದು ಹೇಳಲಾಗಿದೆ. ಅನೇಕ ಬಲಪಂಥೀಯ ಉಗ್ರಗಾಮಿಗಳ ಉತ್ಕರ್ಷ ಕೂಡ ಆಫ್ರಿಕನ್-ಅಮೆರಿಕನ್ ಅಧ್ಯಕ್ಷರು ಎದುರಿಸುತ್ತಿರುವ ಬೆದರಿಕೆಗಳಿಗೆ ಸಾಕ್ಷಿಯೊದಗಿಸಿದೆ.