ಚೀನಾದಲ್ಲಿ ಇಂಟರ್‌ನೆಟ್ ವ್ಯಸನಿಗಳ ಪುನಶ್ಚೇತನ ಕೇಂದ್ರದಲ್ಲಿ 14 ವರ್ಷ ವಯಸ್ಸಿನ ಬಾಲಕನಿಗೆ ಪದೇ ಪದೇ ಥಳಿಸಿದ್ದರಿಂದ ಅವನ ಮೂತ್ರಪಿಂಡ ವಿಫಲಗೊಂಡಿದ್ದು ತೀವ್ರ ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾನೆಂದು ರಾಜ್ಯ ಮಾಧ್ಯಮ ಬುಧವಾರ ತಿಳಿಸಿದೆ. ಸಿಚುವಾನ್ ಪ್ರಾಂತ್ಯದಲ್ಲಿ ಇನ್ನೊಬ್ಬ ಅಪ್ರಾಪ್ತ ವಯಸ್ಕ ಬಾಲಕ ಪುನಶ್ಚೇತನ ಕೇಂದ್ರದಲ್ಲಿ ಇದೇ ಮಾದರಿಯಲ್ಲಿ ಚಿತ್ರಹಿಂಸೆಗೆ ಗುರಿಯಾಗಿ ಅಸುನೀಗಿದ ಬಳಿಕ ಇನ್ನೊಂದು ಘಟನೆ ಸಂಭವಿಸಿದೆ.
ಬಾಲಕನ ಪೋಷಕರು ಅವನ ಇಂಟರ್‌ನೆಟ್ ಚಟವನ್ನು ಬಿಡಿಸಲು ಪುನಶ್ಚೇತನ ಕೇಂದ್ರಕ್ಕೆ ಸೇರಿಸಿದ್ದರು. ಬಾಲಕನ ಸಾವಿನಿಂದ ಚೀನದಲ್ಲಿ ಇಂಟರ್‌ನೆಟ್‌ನಲ್ಲಿ ಆಕ್ರೋಶಪೂರಿತ ಹೇಳಿಕೆಗಳು ಹೊರಬಿದ್ದಿದ್ದು, ವಿಶ್ವವ್ಯಾಪಿ ಪ್ರಚಾರ ಪಡೆಯಿತು.
ತಜ್ಞರು ಇಂಟರ್‌ನೆಟ್ ಚಟದ ಚಿಕಿತ್ಸೆ ಮತ್ತು ಗುರುತಿಸುವಿಕೆಗೆ ನಿರ್ದಿಷ್ಟ ಕಾನೂನು ಮತ್ತು ನಿಮಯಗಳಿಗೆ ಕರೆ ನೀಡಿದ್ದಾರೆ. ಸಿಚುವಾನ್ ಪ್ರಾಂತ್ಯದ ಚಿಕಿತ್ಸಾ ಶಿಬಿರದಲ್ಲಿ ಪುನರಾವರ್ತಿತ ಥಳಿತದಿಂದ ಪು ಲಿಯಾಂಗ್ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿದ್ದು, ಪೊಲೀಸರು ಅವನನ್ನು ಪತ್ತೆಹಚ್ಚಿದಾಗ ಏಕಾಂತ ಕೋಣೆಯಲ್ಲಿ ಅವನನ್ನು ಇರಿಸಿದ್ದರು.