ಉಗ್ರಗಾಮಿ ಕಮಾಂಡರ್ ಮೌಲ್ವಿ ಫಖೀರ್ ಮೊಹಮದ್ ಬುಧವಾರ ಪಾಕಿಸ್ತಾನ ತಾಲಿಬಾನ್ ನಾಯಕನೆಂದು ಸ್ವತಃ ಘೋಷಿಸಿಕೊಂಡಿದ್ದಾನೆ. ಬೈತುಲ್ಲಾ ಮೆಹ್ಸೂದ್ ಬದಲಿಗೆ ತಾನು ತಾತ್ಕಾಲಿಕವಾಗಿ ನಾಯಕತ್ವ ವಹಿಸಿಕೊಂಡಿರುವುದಾಗಿ ಮೌಲ್ವಿ ಹೇಳಿದ್ದಾನೆ.
ಮೆಹ್ಸೂದ್ ಡ್ರೋನ್ ದಾಳಿಯಲ್ಲಿ ಸತ್ತಿದ್ದಾನೆಂದು ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ದೃಢಪಡಿಸಿದ್ದು, ತಾಲಿಬಾನ್ ಮುಖಂಡತ್ವಕ್ಕಾಗಿ ಎರಡು ಬಣಗಳ ನಡುವೆ ಕಚ್ಚಾಟ ಆರಂಭವಾಗಿದೆ. ಆಫ್ಘಾನಿಸ್ತಾನ ಗಡಿಯ ಬಾಜೌರ್ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್ ಅಧಿಪತಿಯಾಗಿದ್ದ ಮೌಲ್ವಿ ಫಖೀರ್ ದೂರವಾಣಿಯಲ್ಲಿ ಪತ್ರಕರ್ತರನ್ನು ಸಂಪರ್ಕಿಸಿ, ತಾಲಿಬಾನ್‌ನ ಹೊಸ ಮುಖಂಡನೆಂದು ಸ್ವತಃ ಘೋಷಿಸಿಕೊಂಡಿದ್ದಾನೆ.
ಆದರೆ ಮೆಹ್ಸೂದ್ ಸಾವನ್ನು ಮೌಲ್ವಿ ಅಲ್ಲಗಳೆದಿದ್ದು, ಅವನು ಜೀವಂತವಾಗಿದ್ದು ತೀವ್ರ ಕಾಯಿಲೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಗೋಪ್ಯಸ್ಥಳದಲ್ಲಿದ್ದಾನೆಂದು ಹೇಳಿದ್ದಾನೆ. ಒಂದು ವೇಳೆ ಮೆಹ್ಸೂದ್ ಹುತಾತ್ಮನಾದರೂ ತಾಲಿಬಾನ್ ಚಟುವಟಿಕೆ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲವೆಂದು ಅವನು ಹೇಳಿದ್ದಾನೆ.
ತಾಲಿಬಾನಿಗೆ ಹೊಸ ನಾಯಕನ ಆಯ್ಕೆಗೆ ಶುರಾ ಎಂದು ಹೆಸರಾದ ತಾಲಿಬಾನ್ ಮಂಡಳಿ ಸಭೆ ಕರೆದಿರುವುದನ್ನು ಅವನು ಅಲ್ಲಗಳೆದಿದ್ದು, ಸಭೆ ನಡೆದಿರುವ ವರದಿಗಳು ನಿರಾಧಾರವೆಂದು ತಿಳಿಸಿದ್ದಾನೆ. ಕಮಾಂಡರ್‌ಗಳಾದ ವಾಲಿ ಉರ್ ರೆಹಮಾನ್ ಮತ್ತು ಹಕೀಮುಲ್ಲಾ ಮೆಹ್ಸೂದ್‌ಗೆ ಎಲ್ಲ ಉಗ್ರಗಾಮಿ ಬಣಗಲ ಜತೆ ಸಮಾಲೋಚಿಸದೇ ಹೊಸ ನಾಯಕನನ್ನು ಆಯ್ಕೆ ಮಾಡುವ ಹಕ್ಕು ಹೊಂದಿಲ್ಲವೆಂದು ಹೇಳಿದ್ದಾನೆ.