ಉನ್ನತ ಮಟ್ಟದ ಅಲ್ ಖಾಯಿದಾ ಸದಸ್ಯರನ್ನು ನಿರ್ಮೂಲನೆ ಮಾಡಲು ಅಮೆರಿಕದ ಗುಪ್ತಚರ ಏಜೆನ್ಸಿ ಸಿಐಎ 2004ರಲ್ಲಿ ಖಾಸಗಿ ಭದ್ರತಾ ಗುತ್ತಿಗೆದಾರರಿಗೆ ಗುಪ್ತ ಕಾರ್ಯಕ್ರಮದ ಭಾಗವಾಗಿ ಹೊರಗುತ್ತಿಗೆ ನೀಡಿತ್ತೆಂದು ಮಾಧ್ಯಮದ ವರದಿಗಳು ಗುರುವಾರ ತಿಳಿಸಿದೆ.
ಬ್ಲಾಕ್‌ವಾಟರ್ ಯುಎಸ್‌ಎ ಭದ್ರತಾ ಸಂಸ್ಥೆಯ ಕಾರ್ಯಾಚರಣೆ ಇರಾಕ್‌ನಲ್ಲಿ ತೀವ್ರ ತಪಾಸಣೆಗೆ ಒಳಗಾಗಿದ್ದು, ಅಲ್ ಖಾಯಿದಾದ ಉನ್ನತ ಮುಖಂಡರ ಮೇಲೆ ಗುರಿಯಿರಿಸುವ ಜವಾಬ್ದಾರಿ ವಹಿಸಲಾಗಿತ್ತೆಂದು ಹೆಸರುಹೇಳಲು ಇಚ್ಛಿಸದ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಗಳು ತಿಳಿಸಿವೆ.
ತರಬೇತಿ ಮತ್ತು ಶಸ್ತ್ರಾಸ್ತ್ರಕ್ಕಾಗಿ ಉತ್ತರ ಕರೊಲಿನದ ಕಂಪೆನಿಗೆ ಲಕ್ಷಾಂತರ ಡಾಲರ್ ನೀಡಲಾಗಿತ್ತೆಂದು ಹೇಳಲಾಗಿದ್ದು, ಆದರೆ ಅದು ಕಾರ್ಯೋನ್ಮುಖವಾಗುವ ಮುನ್ನವೇ ರದ್ದಾಯಿತೆಂದು ರಹಸ್ಯ ಯೋಜನೆ ಬಗ್ಗೆ ಪರಿಚಯವಿರುವ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.ಏನಾದರೂ ತಪ್ಪು ಸಂಭವಿಸಿದಾಗ ಹೊರಗುತ್ತಿಗೆಯು ಏಜೆನ್ಸಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆಂದು ಹತ್ಯೆ ಕಾರ್ಯಕ್ರಮಕ್ಕೆ ನಿಕಟ ಸಾಮಿಪ್ಯ ಹೊಂದಿರುವ ನಿವೃತ್ತ ಗುಪ್ತಚರ ಅಧಿಕಾರಿ ತಿಳಿಸಿದ್ದಾರೆಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಏಜೆನ್ಸಿಯ ಅರೆಮಿಲಿಟರಿ ಪಡೆಯನ್ನು ಬಳಸಿಕೊಂಡು ಉನ್ನತ ಅಲ್ ಖಾಯಿದಾ ನಾಯಕರನ್ನು ಹತ್ಯೆ ಮಾಡುವುದು ಅಥವಾ ಸೆರೆಹಿಡಿಯುವ ಸಿಐಎ ನೇತೃತ್ವದ ಪ್ರಯತ್ನವಾಗಿ 2001ರಲ್ಲಿ ಗುಪ್ತಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆದರೆ 2004ರಲ್ಲಿ ಸಿಐಎ ಈ ಕಾರ್ಯಕ್ರಮಕ್ಕೆ ಭಿನ್ನ ಸಂಕೇತನಾಮದಿಂದ, ಹೊರಗಿನ ಗುತ್ತಿಗೆದಾರರನ್ನು ಬಳಸಿಕೊಂಡು ಪುನಶ್ಚೇತನ ನೀಡಲು ನಿರ್ಧರಿಸಿತೆಂದು ಅಧಿಕಾರಿಗಳು ಹೇಳಿದ್ದಾರೆ.