ಮುಸ್ಲಿಂ ಈಜುಡುಗೆ ಬುರ್ಖಿನಿ ಇಡೀ ದೇಹವನ್ನು ಪೂರ್ತಿಯಾಗಿ ಮುಚ್ಚಿರುತ್ತದೆ. ಇಟಲಿ ನಗರ ವೆರೆಲ್ಲೊ ಸೆಸಿಯದಲ್ಲಿ ದೇಹವನ್ನು ಪೂರ್ತಿಯಾಗಿ ಮುಚ್ಚುವ ಬುರ್ಖಿನಿ ಈಜುಡುಗೆಯನ್ನು ಮುಸ್ಲಿಂ ಮಹಿಳೆಯರು ಧರಿಸುವುದಕ್ಕೆ ನಿಷೇಧ ವಿಧಿಸಲಾಗಿದೆ. ಬುರ್ಖಿನಿಯು ತಲೆಯನ್ನು ಮುಚ್ಚುವ ವಸ್ತ್ರ, ಸಡಿಲ ನಿಲುವಂಗಿ ಮತ್ತು ಕಾಲನ್ನು ಮುಚ್ಚುವ ಸಡಿಲ ವಸ್ತ್ರವಾಗಿದ್ದು ಅದನ್ನು ಧರಿಸಿದರೆ 500 ಯೂರೊ ದಂಡ ತೆರಬೇಕಾಗುತ್ತದೆಂದು ಇಟಲಿಯ ಅಧಿಕೃತ ಆನ್ಸಾ ಸುದ್ದಿಏಜೆನ್ಸಿ ಹೇಳಿದೆ.
ಮುಸ್ಲಿಂ ರಾಷ್ಟ್ರಗಳಲ್ಲಿ ಪಾಶ್ಚಿಮಾತ್ಯ ಈಜುಡುಗೆ ಬಿಕಿನಿ ಧರಿಸಿದ ವಿದೇಶಿ ಮಹಿಳೆಯರಿಗೆ ಘೋರ ಶಿಕ್ಷೆಯೇ ಕಾದಿರುತ್ತದೆ. ಅದಕ್ಕೆ ಪ್ರತಿಯಾಗಿ ಮುಸ್ಲಿಂ ಮಹಿಳೆಯರ ಈಜುಡುಗೆ ಬುರ್ಖಿನಿಯನ್ನು ವಿದೇಶಗಳಲ್ಲಿ ನಿಷೇಧಿಸಲಾಗಿದೆಯೆಂದು ಭಾವಿಸಲಾಗಿದೆ.
ಮುಖ ಮತ್ತು ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಂಡ ಮಹಿಳೆಯರನ್ನು ಕಂಡರೆ ಸಣ್ಣ ಮಕ್ಕಳಿಗೆ ಹೆದರಿಕೆ ಹುಟ್ಟಿಸುತ್ತದೆ ಮತ್ತು ಆರೋಗ್ಯದ ಸಮಸ್ಯೆಗಳನ್ನು ಹೇಳುವುದೇ ಬೇಡ . ನಾವು ಎಲ್ಲ ಸಂದರ್ಭಗಳಲ್ಲೂ ಸಹನೆಯಿಂದಿರಲು ಸಾಧ್ಯವಿಲ್ಲವೆಂದು ಪೀಡ್‌ಮೊಂಟ್ ಮೇಯರ್ ಗಿಯಾನ್‌ಲುಕಾ ಬುನ್ಯಾನೊ ತಿಳಿಸಿದ್ದಾರೆ.
ಪಾಶ್ಚಿಮಾತ್ಯ ಮಹಿಳೆಯು ಮುಸ್ಲಿಂ ರಾಷ್ಟ್ರದಲ್ಲಿ ಬಿಕಿನಿ ಧರಿಸಿ ಸ್ನಾನ ಮಾಡುವುದನ್ನು ಊಹಿಸಿಕೊಳ್ಳಿ. ಅವರಿಗೆ ಶಿರಚ್ಛೇದ, ಜೈಲು ಮತ್ತು ಗಡೀಪಾರು ಶಿಕ್ಷೆಗಳು ಕಾದಿರುತ್ತವೆ. ನಾವು ಕೇವಲ ಬುರ್ಖಿನಿಯ ಬಳಕೆಯನ್ನು ಮಾತ್ರ ನಿಷೇಧಿಸುತ್ತೇವೆಂದು ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಬುನಾನೊ ಹೇಳಿದ್ದಾರೆ.
ಕಳೆದ ವಾರ ಕೂಡ ಪ್ಯಾರಿಸ್ ಈಜುಕೊಳವೊಂದರಲ್ಲಿ ಬುರ್ಖಿನಿ ಧರಿಸಿದ ಮಹಿಳೆಯರಿಗೆ ಇದೇ ಆಧಾರದ ಮೇಲೆ ಪ್ರವೇಶ ನಿರಾಕರಿಸುವ ಮೂಲಕ ಫ್ರಾನ್ಸ್‌ನಲ್ಲಿ ಮುಸ್ಲಿಂ ಉಡುಪು ನಿಷೇಧದಿಂದ ಉದ್ವಿಗ್ನತೆ ಭುಗಿಲೆದ್ದಿತ್ತು.