ಮಲೇಶಿಯ ಪೊಲೀಸರು ಅಂತಾರಾಷ್ಟ್ರೀಯ ಮಾದಕವಸ್ತು ಜಾಲವೊಂದರ ಮೇಲೆ ದಾಳಿ ಮಾಡಿ ಮೂವರು ಭಾರತೀಯರು ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ.ಶನಿವಾರ ಮಾದಕವಸ್ತು ಕೂಟದ ಮೇಲೆ ದಾಳಿ ಮಾಡಿದಾಗ 1.5 ಮಿಲಿಯನ್ ರಿಂಗಿಟ್(1.95 ಕೋಟಿ ರೂ.) ಮಾದಕವಸ್ತುಗಳನ್ನು ಪತ್ತೆಹಚ್ಚಿರುವುದಾಗಿ ನಗರ ಡೆಪ್ಯೂಟಿ ಪೊಲೀಸ್ ಮುಖ್ಯಸ್ಥ ಅಬ್ದುಲ್ ಸಮದ್ ಮಾಟ್ ತಿಳಿಸಿದ್ದು, ಅವರಲ್ಲಿ ಮೂವರು ಭಾರತೀಯರು ಮತ್ತು ಇಬ್ಬರು ಮ್ಯಾನ್ಮಾರ್ ಪೌರರು ಸೇರಿದ್ದಾರೆಂದು ಹೇಳಿದರು.
ಆರೋಪಿಗಳಿಂದ ನಿಸ್ಸಾನ್ ಸೆಂಟ್ರ ಮತ್ತು 32,000 ರಿಂಗಿಟ್ ಕೂಡ ವಶಪಡಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಪೊಲೀಸರ ತಂಡವು ಮನೆಯೊಂದರ ಮೇಲೆ ದಾಳಿ ಮಾಡಿ 59.7 ಕೇಜಿ ಕೆಟಾಮಿನ್ ಪತ್ತೆಹಚ್ಚಿದೆ ಮತ್ತು 400 ಗ್ರಾಂ ಹೆರಾಯಿನ್, 79 ಎಕ್ಟೈಸಿ ಮಾತ್ರೆಗಳು, 13 ಗ್ರಾಂ ಗಾಂಜಾ ಮತ್ತು 19 ಗ್ರಾಂ ಸ್ಯಾಬು ವಶಕ್ಕೆ ತೆಗೆದುಕೊಂಡರು.
ಮಾದಕಜಾಲದ ಕೂಟವು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿತ್ತೆಂದು ಮಾಧ್ಯಮದ ವರದಿ ತಿಳಿಸಿದೆ. ಮಲೇಶಿಯಕ್ಕೆ ಕೆಟಾಮಿನ್ ಕಳ್ಳಸಾಗಣೆಗೆ ಭಾರತೀಯ ಪೌರನೊಬ್ಬ ಸೂತ್ರಧಾರಿಯೆಂದು ಪೊಲೀಸರಿಗೆ ಸುಳಿವು ಸಿಕ್ಕಿದ್ದರಿಂದ ಕಳೆದ ತಿಂಗಳು ತನಿಖೆ ಆರಂಭಿಸಿದ್ದರು.