ಆಸ್ಟ್ರೇಲಿಯದಲ್ಲಿ ಉನ್ನತ ಶಿಕ್ಷಣಕ್ಕೆ ವೀಸಾ ಅರ್ಜಿಗಳ ಸಂಖ್ಯೆ ತೀವ್ರ ಹೆಚ್ಚುತ್ತಿರುವುದರಿಂದ, ನೈಜ ವಿದ್ಯಾರ್ಥಿಗಳು ಬರುವುದನ್ನು ಖಾತರಿಪಡಿಸಲು ತನ್ನ ವೀಸಾ ನೀತಿಯನ್ನು ಬಿಗಿಗೊಳಿಸಲಿದೆ. ವಲಸೆ ಮತ್ತು ಪೌರತ್ವ ಇಲಾಖೆಯು ವಂಚನೆ ತಪ್ಪಿಸಲು ಮತ್ತು ಆಸ್ಟ್ರೇಲಿಯಲ್ಲಿ ವಿದ್ಯಾರ್ಥಿಗಳ ವಾಸಕ್ಕೆ ಮತ್ತು ಅಧ್ಯಯನಕ್ಕೆ ಆರ್ಥಿಕ ಸಾಮರ್ಥ್ಯ ಖಾತರಿಗೆ ವಿದ್ಯಾರ್ಥಿ ವೀಸಾ ಅರ್ಜಿಗಳ ತಪಾಸಣೆಯನ್ನು ಬಲಪಡಿಸುತ್ತಿದೆಯೆಂದು ಅಧಿಕೃತ ಹೇಳಿಕೆ ತಿಳಿಸಿದೆ.
ಇದರಿಂದ ಶಿಕ್ಷಣವನ್ನು ಪಡೆಯುವ ಹೆಸರಿನಲ್ಲಿ ವಲಸೆ ಬಂದು ಅರೆಕುಶಲ ಕಾರ್ಮಿಕರಾಗಿ ಕೆಲಸ ಮಾಡುವ ವಿದೇಶಿ ವಿದ್ಯಾರ್ಥಿಗಳ ಸಂಚಾರಕ್ಕೆ ತಡೆಬೀಳಲಿದೆಯೆಂದು ಹೇಳಲಾಗಿದೆ.ವಿದ್ಯಾರ್ಥಿ ವೀಸಾಗಳಿಗೆ ಅರ್ಜಿಗಳು ಶೇ.20ರಷ್ಟು ಏರಿಕೆಯಾಗಿ 3,62,193ಕ್ಕೆ ಮುಟ್ಟಿದೆಯೆಂದು ಮತ್ತು 28,000 ವಿದ್ಯಾರ್ಥಿ ವೀಸಾಗಳನ್ನು ನಿರಾಕರಿಸಲಾಗಿದೆಯೆಂದು ವಲಸೆ ಮತ್ತು ಪೌರತ್ವ ಸಚಿವ ಕ್ರಿಸ್ ಇವಾನ್ಸ್ ತಿಳಿಸಿದ್ದಾರೆ.
ಆಸ್ಟ್ರೇಲಿಯ ಕೈಗೊಳ್ಳುವ ಕ್ರಮಗಳಲ್ಲಿ ದಾಖಲೆ ಸಂಬಂಧಿತ ವಂಚನೆ ಮತ್ತು ಆರ್ಥಿಕ ಸಾಮರ್ಥ್ಯ ಗುರುತಿಸುವಿಕೆ ಸೇರಿದೆ. ವಂಚನೆ ಮತ್ತು ನಿಷ್ಕ್ರಿಯತೆ ಶಂಕಿಸಿರುವ ಏಜೆಂಟರ ಮೂಲಕದ ವೀಸಾಗಳನ್ನು ತಪಾಸಣೆ ಮಾಡಲು ಸಂದರ್ಶನ ಕಾರ್ಯಕ್ರಮ ಮೇಲ್ದರ್ಜೆಗೇರಿಸುವುದು ಕೂಡ ಸೇರಿದೆ.