ಇಸ್ಲಾಮಾಬಾದ್, ಶುಕ್ರವಾರ, 21 ಆಗಸ್ಟ್ 2009( 11:43 IST )
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಜತೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಆಕ್ಸ್‌ಫರ್ಡ್ ವಿವಿಯಲ್ಲಿ ಓದುವಾಗ ಸಂಬಂಧ ಹೊಂದಿದ್ದರೆಂದು ಹೊಸ ಪುಸ್ತಕದಲ್ಲಿ ಬರೆದಿರುವ ಬಗ್ಗೆ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಭುಟ್ಟೊ ಕುಟುಂಬದ ಇತರೆ ಸದಸ್ಯರು ತೀವ್ರ ನೊಂದುಕೊಂಡಿದ್ದಾರೆ.
ಲೇಖಕ ಕ್ರಿಸ್ಟೋಫರ್ ಸ್ಯಾಂಡ್‌ಫೋರ್ಡ್ ಬರೆದಿರುವ ಇಮ್ರಾನ್ ಖಾನ್ ಜೀವನಚರಿತ್ರೆಯಲ್ಲಿ ಬೆನಜೀರ್ ಭುಟ್ಟೊ ಮತ್ತು ಖಾನ್ ಆಕ್ಸ್‌ಫರ್ಡ್ ವಿವಿ ದಿನಗಳಲ್ಲಿ ಪ್ರೇಮ ಸಂಬಂಧ ಹೊಂದಿರುವುದಕ್ಕೆ ಯಾವುದೇ ಪುರಾವೆ ನೀಡಿಲ್ಲವೆಂದು ಭುಟ್ಟೊ ಕುಟುಂಬದ ನಿಕಟ ಸ್ನೇಹಿತ ಮತ್ತು ಬೆನಜೀರ್ ನಂಬಿಕಸ್ಥರಾಗಿದ್ದ ವಾಜಿದ್ ಶಾಮ್ಸಲ್ ಹಸನ್ ಸ್ಪಷ್ಟಪಡಿಸಿದ್ದಾರೆ.
ಇಂತಹ ನಿರಾಧಾರದ ಕಥೆಯಿಂದ ತಮಗೆ ವೈಯಕ್ತಿಕವಾಗಿ ತೀವ್ರ ನೋವಾಗಿದ್ದು, ಅದಕ್ಕಿಂತ ಹೆಚ್ಚಾಗಿ ಅಧ್ಯಕ್ಷರು, ಭುಟ್ಟೊ ಮಕ್ಕಳು ಮತ್ತು ಕುಟುಂಬಕ್ಕೆ ತೀವ್ರ ನೋವುಂಟಾಗಿದೆಯೆಂದು ಹಸನ್ ಇಸ್ಲಾಮಾಬಾದ್‌ನಿಂದ ಲಂಡನ್‌ಗೆ ಆಗಮಿಸುತ್ತಿದ್ದಂತೆ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು. ಇಮ್ರಾನ್ ಸುತ್ತ ಮುತ್ತಿಕೊಂಡಿರುತ್ತಿದ್ದ ಹುಡುಗಿಯರನ್ನು ವ್ಯಾಖ್ಯಾನಿಸಿ ಮತ್ತು ತೀವ್ರ ಕಾಲ್ಪನಿಕತೆಯ ಆಧಾರದ ಮೇಲೆ ಅವರು ಪುಸ್ತಕ ಬರೆದಿದ್ದಾರೆಯೇ ಹೊರತು ಹುತಾತ್ಮರಾದ ಬೆನಜೀರ್ ಭುಟ್ಟೊ ಅಲ್ಲವೆಂದು ಹಸನ್ ಆಕ್ರೋಶಿತರಾಗಿ ಹೇಳಿದ್ದಾರೆ.
ಭುಟ್ಟೊ ಅವರನ್ನು ಸುಮಾರು 35 ವರ್ಷಗಳಿಂದ ಬಲ್ಲ ಹಸನ್ ಮಾಧ್ಯಮಕ್ಕೆ ನೀಡಿದ ಪ್ರತ್ಯೇಕ ಹೇಳಿಕೆಯಲ್ಲಿ ಮಾಜಿ ಪ್ರಧಾನಮಂತ್ರಿ ತಮಗೆ ಕಿರಿಯ ಸೋದರಿಯಂತಿದ್ದು, ಆಕೆಯ ಜತೆ ಸುದೀರ್ಘ ಸಹಯೋಗದಲ್ಲಿ ಯಾರೊಬ್ಬರೂ ಆಕೆಯ ಚಾರಿತ್ರ್ಯದ ಬಗ್ಗೆ ಬೊಟ್ಟು ಮಾಡಿರಲಿಲ್ಲವೆಂದು ತಿಳಿಸಿದರು. ಬೆನಜೀರ್‌ಗೆ ಯಾರ ಜತೆಯೂ ಸಂಬಂಧವಿರಲಿಲ್ಲ ಮತ್ತು ಜರ್ದಾರಿ ಜತೆ ಅವರ ವಿವಾಹವನ್ನು ಪಾಕಿಸ್ತಾನದ ಸಂಪ್ರದಾಯದ ಪ್ರಕಾರ ವ್ಯವಸ್ಥೆ ಮಾಡಲಾಯಿತು. ಇಮ್ರಾನ್ ಖಾನ್ ಅವರ ಜೀವನಚರಿತ್ರೆ ಪುಸ್ತಕದ ಮಾರಾಟಕ್ಕೆ ಇದೊಂದು ಅಗ್ಗದ ಪ್ರಚಾರವೆಂದು ಹಸನ್ ತಿಳಿಸಿದ್ದಾರೆ.