ತಾಲಿಬಾನ್ ಅಡಗುತಾಣವೆಂದೇ ಹೆಸರಾದ ವಾಯವ್ಯ ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಅಮೆರಿಕದ ಶಂಕಿತ ಕ್ಷಿಪಣಿ ದಾಳಿಯಲ್ಲಿ ಶುಕ್ರವಾರ ಬೆಳಿಗ್ಗೆ ಕನಿಷ್ಠ 9 ಜನರು ಸತ್ತಿದ್ದಾರೆ. ಬೆಳಿಗ್ಗೆ 3.50ಕ್ಕೆ ಕ್ಷಿಪಣಿಯು ಮನೆಯೊಂದಕ್ಕೆ ಬಡಿಯಿತು. ಅದು ಡ್ರೋನ್ ದಾಳಿಯಾಗಿದ್ದು, ದಂಡೆ ದರ್ಪಾ ಖೇಲ್‌ನಲ್ಲಿ ಕ್ಷಿಪಣಿಯು ಮನೆಯೊಂದಕ್ಕೆ ಬಡಿಯಿತು ಎಂದು ಪಾಕಿಸ್ತಾನದ ಭದ್ರತಾ ಅಧಿಕಾರಿ ತಿಳಿಸಿದರು.
ದಾಳಿಯಿಂದ ಮನೆಗೆ ತೀವ್ರ ಹಾನಿಯಾಗಿದ್ದು, ಇಲ್ಲಿಯವರೆಗೆ 9 ದೇಹಗಳನ್ನು ಪತ್ತೆಹಚ್ಚಲಾಗಿದೆಯೆಂದು ಭದ್ರತಾ ಅಧಿಕಾರಿ ತಿಳಿಸಿದರು. ಕ್ಷಿಪಣಿ ದಾಳಿಯಾದ ಕೂಡಲೇ ಉಗ್ರಗಾಮಿಗಳು ಮನೆಯ ಕಾಂಪೌಂಡ್ ಸುತ್ತುವರಿದಿದ್ದು, ಅವಶೇಷಗಳನ್ನು ತೆಗೆಯಲು ಟ್ರಾಕ್ಟರ್ ಬಳಸಲಾಯಿತು. ಆಫ್ಘನ್ ಗಡಿಯಲ್ಲಿ ದಾಳಿ ನಡೆದಿದ್ದನ್ನು ಇನ್ನೊಬ್ಬ ಭದ್ರತಾ ಅಧಿಕಾರಿ ದೃಢಪಡಿಸಿದ್ದು, ಸಾವುನೋವಿನ ಸಂಖ್ಯೆಯನ್ನು ನೀಡಿಲ್ಲ.
ಉತ್ತರ ವಾಜಿರಿಸ್ತಾನದ ಮುಖ್ಯ ಪಟ್ಟಣ ಮಿರಾನ್ ಶಾ ನಿವಾಸಿಗಳು ತಾವು ಭಾರೀ ಶಬ್ದವನ್ನು ಕೇಳಿದ್ದಾಗಿ ಮತ್ತು ಕಿಟಕಿಗಳು ಮತ್ತು ಬಾಗಿಲುಗಳು ಅದುರಿದವೆಂದು ಹೇಳಿದ್ದಾರೆ. ಆಫ್ಘನ್ ತಾಲಿಬಾನ್ ನಾಯಕ ಜಲಾಲುದ್ದೀನ್ ಹಕ್ಕಾನಿ ದಂಡೆ ದರ್ಪಾ ಖೇಲ್‌ನಲ್ಲಿ ಅಡಗುತಾಣಗಳನ್ನು ಹೊಂದಿದ್ದು, ಕಳೆದ ಅಕ್ಟೋಬರ್‌ನಲ್ಲಿ ಬಡಿದ ಕ್ಷಿಪಣಿ ದಾಳಿಯಲ್ಲಿ 11 ಜನರು ಹತರಾಗಿದ್ದಾರೆ.