ತಮಿಳು ಚಲನಚಿತ್ರಗಳಿಗೆ ಎಲ್‌ಟಿಟಿಇ ಧನಸಹಾಯ ಮಾಡಿದೆಯೆಂದು ಆರೋಪಿಸುವ ಮೂಲಕ ಶ್ರೀಲಂಕಾದ ಸಚಿವರೊಬ್ಬರು ವಿವಾದದ ಕಿಡಿ ಸ್ಫೋಟಿಸಿದ್ದಾರೆ. ಪುನರ್ವಸತಿ ಮತ್ತು ಹಾನಿ ಪರಿಹಾರ ಸೇವೆ ಸಚಿವ ಅಬ್ದುಲ್ ರಿಸಾತ್ ಬತಿಯುಥೀನ್ ಈ ಕುರಿತು ತಿಳಿಸುತ್ತಾ, ಎಲ್‌ಟಿಟಿಇ ರಕ್ತದ ಹಣದಲ್ಲಿ ಕಳಂಕಿತವಾದ ಚಿತ್ರಗಳಲ್ಲಿ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಚಿತ್ರಗಳೂ ಸೇರಿವೆಯೆಂದು ಹೇಳಿದ್ದಾರೆ.
ಬತಿಯುಥೀನ್ ಏಷ್ಯನ್ ಟ್ರಿಬ್ಯೂನ್.ಕಾಂಗೆ ಸಂದರ್ಶನವೊಂದರಲ್ಲಿ ಈ ಆರೋಪ ಮಾಡಿದ್ದು, ಲಂಡನ್ ಮೂಲದ ತಮಿಳಿಗರೊಬ್ಬರಿಗೆ ಲಕ್ಷಾಂತರ ಅಮೆರಿಕ ಡಾಲರ್‌ಗಳನ್ನು ನೀಡಿ ರಜನಿಕಾಂತ್ ಮುಂತಾದ ಮೇರುನಟರ ಪಾತ್ರವರ್ಗದೊಂದಿಗೆ ತಮಿಳು ಚಿತ್ರಗಳನ್ನು ತಯಾರಿಸಲು ಅವರಿಗೆ ಸೂಚಿಸಲಾಯಿತೆಂದು ಹೇಳಿದ್ದಾರೆ. ರಜನಿಕಾಂತ್ ಕಚೇರಿಯನ್ನು ಈ ಕುರಿತು ಸಂಪರ್ಕಿಸಿದಾಗ, ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಟ ನಿರಾಕರಿಸಿದ್ದಾರೆಂದು ತಿಳಿಸಿದೆ.
ರಜನಿಕಾಂತ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ ಎಂಥಿರಾನ್ ನಿರ್ಮಿಸುತ್ತಿರುವ ಸನ್ ಫಿಲ್ಮ್ಸ್ ಸಿಒಒ ಹನ್ಸರಾಜ್ ಸಕ್ಸೇನಾ, ಎಂಥಿರಾನ್ ಜತೆ ಇಂತಹ ಆರೋಪಗಳಿಗೆ ನಂಟು ಕಲ್ಪಿಸುವುದು ವರ್ಷದ ದೊಡ್ಡ ಜೋಕ್ ಎಂದು ಹೇಳಿದ್ದಾರೆ. ಸಂದರ್ಶನದಲ್ಲಿ ಎಲ್‌ಟಿಟಿಇ ಪರ ರಾಜಕಾರಣಿಗಳಾದ ರಾಮದಾಸ್, ವೈಕೊ, ತೋಳ್ ತಿರುಮಾವಳವನ್ ಮತ್ತು ನೆಡುಮಾರನ್ ಅವರುಗಳು ಫಲಾನುಭವಿಗಳೆಂದು ಆರೋಪಿಸಲಾಗಿದೆ.
ಆದರೆ ಇವರೆಲ್ಲ ಈ ಆರೋಪಗಳನ್ನು ಖಡಾಖಂಡಿತವಾಗಿ ನಿರಾಕರಿಸಿದ್ದು, ದ್ವೀಪದಲ್ಲಿ ಸಂತ್ರಸ್ತ ತಮಿಳರು ಎದುರಿಸುತ್ತಿರುವ ಮಾನವೀಯ ಬಿಕ್ಕಟ್ಟಿನಿಂದ ಗಮನ ಬೇರೆಕಡೆ ಸೆಳೆಯುವ ತಂತ್ರವೆಂದು ತಳ್ಳಿಹಾಕಿದ್ದಾರೆ.