ಥಾಯ್ಲೆಂಡ್‌ನ ಲಾಪ್‌ಬುರಿ ಪಟ್ಟಣದಲ್ಲಿ ರಾಜಾರೋಷವಾಗಿ ಅಡ್ಡಾಡುವ ಕೋತಿಗಳಿಗೆ ಕಡಿವಾಣ ಹಾಕಲು ಥಾಯ್ಲೆಂಡ್ ಸಂತಾನಹರಣ ಚಿಕಿತ್ಸೆಗೆ ಮುಂದಾಗಿದೆ. ನಿವಾಸಿಗಳು ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಕೋತಿಗಳ ಕಾಟದಿಂದ ಕಿರಿಕಿರಿಯಾಗಿದೆಯೆಂದು ದೂರು ನೀಡಿದ್ದರು. ಬ್ಯಾಂಕಾಕ್ ಉತ್ತರದ ಲಾಪ್‌ಬುರಿ ಜನರಿಗೆ ಅತೀ ಸಾಮಿಪ್ಯದಲ್ಲೇ 2500 ಮಂಗಗಳು ನೆಲೆಸ್ಥಾಪಿಸಿವೆ.
ಪ್ರಖ್ಯಾತ, ಪ್ರಾಚೀನ ಹಿಂದು-ಬೌದ್ಧ ಮಂದಿರದಲ್ಲಿ, ಖೆಮೆರ್ ಶೈಲಿಯ ಪಗೋಡಾಗಳು, ಮನೆಗಳಲ್ಲಿ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ಕೋತಿಗಳು ಹಾವಳಿ ಎಬ್ಬಿಸಿವೆ. ದಾರಿಹೋಕರಿಂದ ಚೀಲಗಳನ್ನು ಕಸಿಯುವುದು, ಆಹಾರ ಕದಿಯಲು ಮನೆಯೊಳಕ್ಕೆ ನುಸುಳುವ ಮೂಲಕ ಕೋತಿಗಳ ಹಾವಳಿ ದಿನನಿತ್ಯದ ಗೋಳಾಗಿದೆ. ನಿವಾಸಿಗಳು ಅನೇಕ ವರ್ಷಗಳವರೆಗೆ ಮಂಗಗಳನ್ನು ಸಹಿಸಿಕೊಂಡರು. ಆದರೆ ಮಂಗಗಳ ಸಂಖ್ಯೆ ತೀವ್ರತರವಾಗಿ ಬೆಳೆಯುತ್ತಿದ್ದು, ಆಹಾರ ಮತ್ತು ವಾಸಿಸುವ ಜಾಗಕ್ಕಾಗಿ ಮಾನವರ ಜತೆಗೆ ಕಚ್ಚಾಟ ತೀವ್ರಗೊಂಡಾಗ ಜನರಿಗೆ ಸಹಿಸಲಸಾಧ್ಯವಾಯಿತು.
ಅವುಗಳ ಬೆಳವಣಿಗೆಗೆ ಕಡಿವಾಣ ಹಾಕಲು ಪಶುವೈದ್ಯರು ಗಂಡುಕೋತಿಗಳಿಗೆ ಸಂತಾನಹರಣ ಚಿಕಿತ್ಸೆಗೆ ಮುಂದಾದರು. ಕೋತಿಗಳಿಗೆ ಕೂಡ ಸಾಕಷ್ಟು ಆಹಾರ, ನೆಲೆಯಿಲ್ಲ. ಅವುಗಳ ಸಂಖ್ಯೆ ಹೆಚ್ಚಿದರೆ ಜನರಿಗೆ ಮತ್ತು ಕೋತಿಗಳಿಗೆ ಕೂಡ ತೊಂದರೆಯೆಂದು ಪಶುವೈದ್ಯರು ಹೇಳಿದ್ದಾರೆ. ಕ್ಯಾಂಡಿ ಚೀಲಗಳೊಂದಿಗೆ ಪ್ರತಿದಿನ ತೆರಳುವ ಪಶುವೈದ್ಯರು ಕೋತಿಗಳಿಗೆ ಪ್ರಚೋದನೆ ನೀಡುವ ಮೂಲಕ ಹಿಡಿದು ಅವುಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುತ್ತಾರೆ.
ಕಾರ್ಯಕ್ರಮದ ಭಾಗವಾಗಿ ಸುಮಾರು 1500 ಗಂಡು ಕೋತಿಗಳಲ್ಲಿ ಅರ್ಧದಷ್ಟು ಸಂತಾನಹರಣ ಚಿಕಿತ್ಸೆಗೆ ಒಳಪಡುವ ಸಂಭವವಿದೆ. ಕೋತಿಗಳು ಲಾಪ್‌ಬುರಿಗೆ ಅನೇಕ ಮಂದಿ ತಲೆನೋವಾಗಿದ್ದರೆ ಪ್ರವಾಸಿಗಳಿಗೆ ಮಾತ್ರ ಕೋತಿಗಳು ಪ್ರಮುಖ ಆಕರ್ಷಣೆಯಾಗಿದೆ. ಮಂಗಾಟಗಳನ್ನು ವೀಕ್ಷಿಸಲೋಸುಗ ಪ್ರವಾಸಿಗಳ ದಂಡೆ ಬರುತ್ತದೆಂದು ದೇವಸ್ಥಾನದ ಕಾರ್ಯಕರ್ತ ಸಾಕ್ಸಿತ್ ಸಾಯಿಪೂ ತಿಳಿಸಿದ್ದಾರೆ.