ಇಸ್ಲಾಮಾಬಾದ್, ಶುಕ್ರವಾರ, 21 ಆಗಸ್ಟ್ 2009( 16:48 IST )
ಕಾಶ್ಮೀರ ವಿಷಯವು ದೇಶದ ವಿದೇಶಾಂಗ ನೀತಿಯ ತಳಹದಿ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ತಿಳಿಸಿದ್ದು, ನಮ್ಮ ಸರ್ಕಾರವು ಈ ವಿಷಯದ ಬಗ್ಗೆ ಹುರುಪಿನಿಂದ ಕಾರ್ಯೋನ್ಮುಖವಾಗಿದೆಯೆಂದು ಹೇಳಿದ್ದಾರೆ. ಕಾಶ್ಮೀರಿ ಜನರ ಹೋರಾಟಕ್ಕೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲಿಸುತ್ತದೆಂದು ಸಂಸತ್ತಿನ ಕೆಳಮನೆಯಲ್ಲಿ ಮಾತನಾಡುತ್ತಾ ಅವರು ತಿಳಿಸಿದ್ದಾರೆ.
ಕಾಶ್ಮೀರ ಸಮಿತಿಗೆ ಸಂಸದೀಯ ಸ್ಥಾನಮಾನ ನೀಡುವಂತೆ ರೆಹ್ಮಾನ್ ಸರ್ಕಾರಕ್ಕೆ ಒತ್ತಾಯಿಸಿದರು. ಕಾಶ್ಮೀರಿಗಳ ಆಶೋತ್ತರಗಳು ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಬದ್ಧವಾಗಿ ಕಾಶ್ಮೀರ ವಿಷಯ ಪರಿಹರಿಸಬೇಕೆಂದು ಇಸ್ಲಾಮಾಬಾದ್ ಒತ್ತಾಯಿಸುತ್ತಿದೆ.ತಮ್ಮ ರಾಷ್ಟ್ರವಾಗಲೀ ಅಥವಾ ತಮ್ಮ ಪಕ್ಷ ಪಿಪಿಪಿಯಾಗಲೀ ಕಾಶ್ಮೀರ ವಿಷಯದ ಬಗ್ಗೆ ಭಾರತದ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಕಾಶ್ಮೀರ ವ್ಯವಹಾರಗಳ ಸಚಿವ ಖಮಾರ್ ಜಮಾನ್ ಕೈರಾ ಬುಧವಾರ ಹೇಳಿದ್ದಾರೆ.
ಪಾಕಿಸ್ತಾನವು ಶಾಂತಿಯುತ ಇತ್ಯರ್ಥಕ್ಕಾಗಿ ಭಾರತದ ಮಾತುಕತೆಗೆ ಸಿದ್ಧವಿದೆ. ಆದರೆ ಎಲ್ಲ ಕಾಶ್ಮೀರಿ ಜನರಿಗೆ ಸ್ವೀಕಾರಾರ್ಹವಾಗುವಂತ ಪರಿಹಾರವನ್ನು ಮಾತ್ರ ಪಾಕಿಸ್ತಾನ ಒಪ್ಪುತ್ತದೆಂದು ಅವರು ನುಡಿದಿದ್ದಾರೆ. ಆದರೆ ರಾಜತಾಂತ್ರಿಕ ಮಟ್ಟದಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪದಿಂದ ಪಾಕಿಸ್ತಾನ ನುಣುಚಿಕೊಂಡಿಲ್ಲವೆಂದು ಅವರು ಹೇಳಿದ್ದಾರೆ.