ಇಸ್ಲಾಮಾಬಾದ್, ಶುಕ್ರವಾರ, 21 ಆಗಸ್ಟ್ 2009( 18:46 IST )
ಅಮೆರಿಕದ ಡ್ರೋನ್ ವಿಮಾನಗಳ ಮಾದರಿಯಲ್ಲೇ ಪಾಕಿಸ್ತಾನ ಕೂಡ ಚಾಲಕರಿಲ್ಲದ ಡ್ರೋನ್ ವಿಮಾನಗಳ ನಿರ್ಮಾಣವನ್ನು ಆರಂಭಿಸಿದೆ. ಚಾಲಕರಹಿತ ವೈಮಾನಿಕ ವ್ಯವಸ್ಥೆ ಮಾರುಕಟ್ಟೆಯಲ್ಲಿ ಮುಂದಿರುವುದಾಗಿ ಹೇಳಿಕೊಂಡಿರುವ ಇಟಲಿಯ ಸೆಲೆಕ್ಸ್ ಗೆಲಿಲಿಯೊ ಸಹಯೋಗದೊಂದಿಗೆ ಅದು ಡ್ರೋನ್ ವಿಮಾನ ನಿರ್ಮಿಸಲಿದೆ.
ಪಾಕಿಸ್ತಾನದ ಏರೋನಾಟಿಕಲ್ ಸಂಕೀರ್ಣದಲ್ಲಿ ಯೋಜನೆಗೆ ಚಾಲನೆ ನೀಡುವ ಅಂಗವಾಗಿ ಸಮಾರಂಭ ನಡೆಯಿತು. ಈ ಯೋಜನೆಯಡಿ ಫಾಲ್ಕೊ ತಯಾರಿಸುವ ಡ್ರೋನ್ ವಿಮಾನವನ್ನು ಇಟಲಿಯ ಸಂಸ್ಥೆ ವಿನ್ಯಾಸಗೊಳಿಸಿದೆ. ವಿಮಾನವು ಪಾಕಿಸ್ತಾನ ವಾಯುಪಡೆಯ ಕಣ್ಗಾವಲು ಅಗತ್ಯಗಳನ್ನು ಪೂರೈಸಲಿದೆ.
ಮಿಲಿಟರಿ ವೈಮಾನಿಕ ಕೈಗಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವ ಸುದೀರ್ಘ ಗುರಿಯತ್ತ ಯುಎವಿ ಸಹ ಉತ್ಪಾದನೆ ಸೌಲಭ್ಯವು ಪ್ರಮುಖ ಹೆಜ್ಜೆಯಾಗಿದೆಯೆಂದು ಪಿಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ವಾಯುಪಡೆಯ ಕಾರ್ಯಾಚರಣೆ ಸಾಮರ್ಥ್ಯವನ್ನು ಫಾಲ್ಕೊ ಹೆಚ್ಚಿಸುತ್ತದೆಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.