ಲಾಕರ್‌ಬೀ ಬಾಂಬರ್ ಅಬ್ಡೆಲ್‌ಬಾಸೆಟ್ ಅಲಿ ಮೊಹ್ಮಟ್ ಅಲ್-ಮೆಗ್ರಾಹಿಯನ್ನು ಲಿಬ್ಯಾದ ನಾಯಕ ಮೋಮರ್ ಕಡಾಫಿ ಭೇಟಿ ಮಾಡಿದ್ದು, ಮೆಗ್ರಾಹಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ ಸ್ಕಾಟ್‌ಲ್ಯಾಂಡ್ ಅಧಿಕಾರಿಗಳ ಧೈರ್ಯವನ್ನು ಮೆಚ್ಚಿದರೆಂದು ಅಧಿಕೃತ ಸುದ್ದಿ ಏಜನ್ಸಿ ಜನಾ ವರದಿ ಮಾಡಿದೆ.
ಈ ಹಂತದಲ್ಲಿ ತಾವು ಸ್ಕಾಟಲ್ಯಾಂಡ್ ಸ್ನೇಹಿತರಿಗೆ, ಸ್ಕಾಟಿಷ್ ನ್ಯಾಷನಲಿಸ್ಟ್ ಪಕ್ಷಕ್ಕೆ ಮತ್ತು ಸ್ಕಾಟ್‌ಲ್ಯಾಂಡ್ ಪ್ರಧಾನಮಂತ್ರಿಗೆ ಸಂದೇಶ ಕಳಿಸಿ, ಅವರ ಧೈರ್ಯಕ್ಕಾಗಿ ಅಭಿನಂದಿಸಿದ್ದಾಗಿ ಕಡಾಫಿ ತಿಳಿಸಿದ್ದಾರೆ. ಬ್ರಿಟನ್ ಪ್ರಧಾನಮಂತ್ರಿ ಬ್ರೌನ್, ರಾಣಿ 2ನೇ ಎಲಿಜಬೆತ್ ಮತ್ತು ರಾಜಕುಮಾರ ಆಂಡ್ರಿವ್ ಅವರನ್ನು ಸ್ಕಾಟಲ್ಯಾಂಡ್ ಸರ್ಕಾರಕ್ಕೆ ಮೆಗ್ರಾಹಿಯನ್ನು ಬಿಡುಗಡೆ ಮಾಡುವಂತೆ ಧೈರ್ಯ ತುಂಬಿದ್ದಕ್ಕಾಗಿ ಅಭಿನಂದಿಸಿದರು.
ಲಿಬ್ಯಾದ ಟೆಲಿವಿಷನ್‌ನಲ್ಲಿ ಕಡಾಫಿ ಅವರು ಮೆಗ್ರಾಹಿಯನ್ನು ಬರಮಾಡಿಕೊಂಡು ಆಲಂಗಿಸಿದ ದೃಶ್ಯಗಳನ್ನು ಬಿತ್ತರಿಸಿದೆ. 1998ರ ಪಾನ್ ಆಮ್ ಫ್ಲೈಟ್ 103 ವಿಮಾನದಲ್ಲಿ ಬಾಂಬ್ ಸ್ಫೋಟದಿಂದ ಸ್ಕಾಟ್‌ಲ್ಯಾಂಡ್ ಪಟ್ಟಣ ಲಾಕರ್‌ಬಿಯಲ್ಲಿ 270 ಜನರು ಬಲಿಯಾಗಿದ್ದರು.
ಬಾಂಬ್ ಸ್ಫೋಟ ನಡೆಸಿದ ಆರೋಪದ ಮೇಲೆ ಮೆಗ್ರಾಹಿಯನ್ನು ತಪ್ಪಿತಸ್ಥನನ್ನಾಗಿಸಿ 2001ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಮಾಡಲಾಗಿತ್ತು. ಆದರೆ 57 ವರ್ಷ ವಯಸ್ಸಿನ ಮೆಗ್ರಾಹಿ ತೀವ್ರ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಒಳಗಾಗಿದ್ದರಿಂದ ಅನುಕಂಪದ ಆಧಾರದ ಮೇಲೆ ಮೆಗ್ರಾಹಿಯನ್ನು ಸ್ಕಾಟಿಷ್ ಅಧಿಕಾರಿಗಳು ಬಿಡುಗಡೆ ಮಾಡಿದರು.