ಪಾಕಿಸ್ತಾನದ ಉತ್ತರ ವಾಜಿರಿಸ್ತಾನದಲ್ಲಿ ಆಫ್ಘನ್ ತಾಲಿಬಾನ್ ನಾಯಕ ಸಿರಾಜುದ್ದೀನ್ ಹಕ್ಕಾನಿ ಅಡಗುತಾಣದ ಮೇಲೆ ಅಮೆರಿಕದ ಡ್ರೋನ್ ವಿಮಾನ ಶುಕ್ರವಾರ ದಾಳಿನಡೆಸಿದ್ದರಿಂದ 14 ಉಗ್ರಗಾಮಿಗಳು ಹತರಾಗಿದ್ದಾರೆ. ಮುಂಜಾನೆ ನಡೆದ ಚಾಲಕರಹಿತ ಡ್ರೋನ್ ದಾಳಿಯಲ್ಲಿ ಸಿರಾಜುದ್ದೀನ್ ಬಳಸುತ್ತಿದ್ದನೆಂದು ಹೇಳಲಾದ ಉತ್ತರ ವಾಜಿರಿಸ್ತಾನ್‌ನ ದಾಂಡೇ ದರ್ಪಾಕೇಲ್ ಪ್ರದೇಶದ ಮನೆ ಮೇಲೆ ಗುರಿಯಿರಿಸಲಾಗಿತ್ತು.
ಆ ದಾಳಿಯಿಂದ ಮನೆಯು ಸುಟ್ಟು ಬೂದಿಯಾಗಿದೆಯೆಂದು ವರದಿಯಾಗಿದೆ. ಅವಶೇಷಗಳಿಂದ ಸುಮಾರು 13 ದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡ ಅನೇಕ ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆಂದು ಟಿವಿ ಚಾನೆಲ್‌ಗಳು ವರದಿ ಮಾಡಿವೆ. ಈ ದಾಳಿಯಿಂದ ಗಡಿಯ ಎರಡೂ ಕಡೆಯಿಂದ ಕಾರ್ಯಾಚರಿಸುತ್ತಿರುವ ಆಫ್ಘನ್ ಯುದ್ಧವೀರ ಸಿರಾಜುದ್ದೀನ್ ಹಕ್ಕಾನಿಯನ್ನು ಬಲಿತೆಗೆದುಕೊಂಡಿದೆಯೇ ಎಂದು ತಕ್ಷಣದ ಮಾಹಿತಿ ದೊರೆತಿಲ್ಲ.
ಆದರೆ ದಾಳಿಯಲ್ಲಿ ಮೂವರು ಮಹಿಳೆಯರು ಅಸುನೀಗಿದ್ದಾರೆಂದು ವರದಿಗಳು ತಿಳಿಸಿವೆ. ಡ್ರೋನ್ ದಾಳಿಗೆ ಗುರಿಯಾದ ಕಾಂಪೌಂಡ್‌ನಲ್ಲಿ ವಾಸಿಸುತ್ತಿದ್ದ ಬಹುತೇಕ ಜನರು ಆಫ್ಘಾನಿಸ್ತಾನಕ್ಕೆ ಸೇರಿದವರು. ಈ ದಾಳಿಯಲ್ಲಿ ಐದು ಮನೆಗಳು ನಾಶವಾಗಿವೆ. ದಾಂಡೇ ದರ್ಪಾಕೆಲ್ ಹಕ್ಕಾನಿ ಜಾಲಕ್ಕೆ ಸೇರಿದ ಅಡಗುತಾಣಗಳನ್ನು ಹೊಂದಿದೆ. ಇದೇ ಗ್ರಾಮದ ಮೇಲೆ ಕಳೆದ ಅಕ್ಟೋಬರ್‌ನಲ್ಲಿ ನಡೆದ ದಾಳಿಯಲ್ಲಿ ಬಹುತೇಕ ವಿದೇಶಿಯರಾದ 11 ಉಗ್ರಗಾಮಿಗಳು ಹತರಾಗಿದ್ದರು.