84 ಸುಂದರಿಯರ ಪೈಕಿ ಅಗ್ರ 15ರಲ್ಲಿ ಕೂಡ ಸ್ಥಾನ ಪಡೆದುಕೊಳ್ಳಲು ಭಾರತ ಸುಂದರಿ ಏಕ್ತಾ ಚೌಧರಿ ವಿಫಲರಾಗಿದ್ದು, ಮಿಸ್ ಭುವನ ಸುಂದರಿ ಪಟ್ಟ ಮತ್ತೆ ವೆನಿಜುವೆಲಾ ಪಾಲಾಗಿದೆ.
ವೆನಿಜುವೆಲಾ ಸ್ಟೆಫಾನಿಯಾ ಫೆರ್ನಾಂಡೆಜ್ ಇತರೆಲ್ಲಾ ದೇಶದ ಸುಂದರಿಯರನ್ನು ಹಿಂದಿಕ್ಕಿ ಪ್ರಶಸ್ತಿಗೆ ಭಾಜನರಾದರು. 2008ರ ಭುವನ ಸುಂದರಿ ಪಟ್ಟ ಕೂಡ ವೆನಿಜುವೆಲಾ ಪಾಲಾಗಿತ್ತು. ಕಳೆದ ಬಾರಿಯ ಭುವನ ಸುಂದರಿ ಡಯಾನಾ ಮೆಂಜೋಜಾರವರು ಸ್ಟೆಫಾನಿಯಾ ಫೆರ್ನಾಂಡೆಜ್‌ರಿಗೆ ಕಿರೀಟವನ್ನು ತೊಡಿಸಿದರು.
ಡೊಮಿನಿಕನ್ ಗಣರಾಜ್ಯದ ಆಡಾ ಡೇ ಲಾ ಕ್ರೂಜ್ ಮೊದಲ ರನ್ನರ್-ಅಪ್ ಪ್ರಶಸ್ತಿ ಗೆದ್ದರು. ಎರಡನೇ ರನ್ನರ್-ಅಪ್ ಆಗಿ ಕೊಸೊವೊದ ಮರಿಗೋನಾ ಡ್ರಾಗುಸಾ, ಮೂರನೇ ರನ್ನರ್-ಅಪ್ ಆಸ್ಟ್ರೇಲಿಯಾದ ರಚೆಲ್ ಫಿಂಚ್ ಹಾಗೂ ನಾಲ್ಕನೇ ರನ್ನರ್-ಅಪ್ ಸ್ಥಾನ ಪೋರ್ಟೊರಿಕೋದ ಮಾಯ್ರಾ ಮಾತೋಸ್ ಪಾಲಾಯಿತು.
ಅಗ್ರ 10ರ ಪಟ್ಟಿಯಲ್ಲಿ ಫ್ರಾನ್ಸ್‌ನ ಚೋಲೆ ಮೋರ್ತಾದ್, ದಕ್ಷಿಣ ಆಫ್ರಿಕಾದ ತಾತುಮ್ ಕೇಶ್ವರ್, ಸ್ವಿಟ್ಜರ್ಲೆಂಡ್‌ನ ವಿಟ್ನಿ ಟಾಯ್ಲೇ, ಝೆಕ್ ಗಣರಾಜ್ಯದ ಇವೆಟಾ ಲುತೋವ್ಸ್‌ಕಾ ಹಾಗೂ ಅಮೆರಿಕಾದ ಕ್ರಿಸ್ಟಿನ್ ಡಾಲ್ಟನ್ ಸ್ಥಾನ ಪಡೆದಿದ್ದಾರೆ.
ಅಗ್ರ 15ರಲ್ಲಿ ಅಲ್ಬೇನಿಯಾದ ಹಸ್ನಾ ಕ್ಸೂಕಿಸ್, ಬೆಲ್ಜಿಯಂನ ಝಾಯ್ನೆಪ್ ಸೇವರ್, ಸ್ವೀಡನ್‌ನ ರೆನೇಟ್ ಸೆರ್ಜೆನ್, ಕ್ರೊವೇಶಿಯಾದ ಸಾರಾ ಕೊಸಿಕ್ ಮತ್ತು ಐಸ್‌ಲೆಂಡ್‌ನ ಇಂಜಿಜೋಗ್ ರಗ್ನಾಹೈರ್ ಇಜಿಲ್‌ಡೊಟಿರ್ ಸ್ಥಾನ ಪಡೆದಿದ್ದಾರೆ.
ಸೋಮವಾರ ಮುಂಜಾನೆ ಬಹಾಮಸ್‌ನ ದ್ವೀಪದಲ್ಲಿ ಆರಂಭವಾದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಸುಂದರಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆ ಮೂಲಕ ಲಾರಾ ದತ್ತಾ ಮತ್ತು ಸುಷ್ಮಿತಾ ಸೇನ್ ಸಾಲಿಗೆ ಸೇರುವ ಅವಕಾಶವನ್ನು ಏಕ್ತಾ ಕಳೆದುಕೊಂಡರು.
ಭುವನ ಸುಂದರಿ ಸ್ಪರ್ಧೆಯ ಗೌನ್ ಸ್ಪರ್ಧೆಯಲ್ಲಿ ಅಂತಿಮ ಐದರ ಸುತ್ತಿಗಾಗಿ ಸುಂದರಿಯರನ್ನು ಆಯ್ಕೆ ಮಾಡಲಾಯಿತು. ಇದಕ್ಕೂ ಮೊದಲು 84 ದೇಶದ ಸುಂದರಿಯರಲ್ಲಿ ಬಿಕಿನಿ, ಈಜುಡುಗೆ ಸುತ್ತಿನಲ್ಲಿ ಅಂತಿಮ 15 ಸುಂದರಿಯನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಏಕ್ತಾ ವಿಫಲರಾದರು.
ಏಕ್ತಾ ಚೌಧರಿಯ ಪೂರ್ಣ ಹೆಸರು ಏಕ್ತಾ ಚೌಧರಿ ಯಾದವ್. 1986ರ ಮಾರ್ಚ್ 31ರಂದು ಜನಿಸಿದ ಆಕೆ ದೆಹಲಿಯ ಮೊದಲ ಮುಖ್ಯಮಂತ್ರಿ ಚೌಧರಿ ಬ್ರಹ್ಮ ಪ್ರಕಾಶ್ ಯಾದವ್‌ರ ಮೊಮ್ಮಗಳು. ಮಿಸ್ ಇಂಡಿಯಾ ಯುನಿವರ್ಸ್ 2009 ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಚೌಧರಿ ಭುವನ ಸುಂದರಿ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು.