ಉಗ್ರಗಾಮಿ ಗುಂಪುಗಳು ಶನಿವಾರ ಹೆಸರಿಸಿರುವ ಹೊಸ ತಾಲಿಬಾನ್ ಮುಖಂಡ ಹಕೀಮುಲ್ಲಾ ಮೆಹ್ಸೂದ್‌ನಂತೆ ಕಾಣುವ ಅವನ ಸೋದರನೇ ಹೊರತು ಹಕೀಮುಲ್ಲಾ ಅಲ್ಲವೆಂದು ಪಾಕಿಸ್ತಾನದ ಗುಪ್ತಚರ ಏಜೆನ್ಸಿಗಳು ನಂಬಿವೆ. ತಾಲಿಬಾನ್ ತನ್ನ ಮರ್ಯಾದೆ ಉಳಿಸಿಕೊಳ್ಳಲು ಹಕೀಮುಲ್ಲಾ ಮೆಹ್ಸೂದ್ ಬದುಕಿದ್ದಾನೆಂಬ ಭಾವನೆ ಮೂಡಿಸಿದೆ.
ಆದರೆ ಸತ್ಯಾಂಶವೇನೆಂದರೆ ತೆಹ್ರಿಕಿ ತಾಲಿಬಾನ್ ಪಾಕಿಸ್ತಾನದ ನೂತನ ಮುಖಂಡ ಹಕೀಮುಲ್ಲಾ ತದ್ರೂಪಿಯಾದ ಸೋದರ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಹಕೀಮುಲ್ಲಾ ಮೆಹ್ಸೂದ್ ಈಗಾಗಲೇ ಸತ್ತಿದ್ದಾನೆಂದು ಪಾಕಿಸ್ತಾನ ಅಧಿಕಾರಿಗಳು ನಂಬಿದ್ದಾರೆ. ಬೈತುಲ್ಲಾ ಮೆಹ್ಸೂದ್ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆಯಾಗಿದ್ದಾನೆಂದು ಪಾಕಿಸ್ತಾನ ಹೇಳಿದೆ.
ಆದರೆ ಬೈತುಲ್ಲಾ ಮೆಹ್ಸೂದ್ ಅಸ್ವಸ್ಥತೆಗೆ ಈಡಾಗಿದ್ದು ಇನ್ನೂ ಬದುಕಿದ್ದಾನೆಂದು ತಾಲಿಬಾನ್ ಹೇಳುತ್ತಿದೆ. ಅವನ ಮರಣಶಾಸನದಲ್ಲಿ ಉಲ್ಲೇಖಿಸಿರುವಂತೆ ಅವನು ಬದುಕಿದ್ದಾಗಲೇ ಹೊಸ ನಾಯಕನನ್ನು ನೇಮಿಸಬೇಕೆಂಬ ಇಚ್ಛೆಯಂತೆ ಹಕೀಮುಲ್ಲಾನನ್ನು ನೇಮಕ ಮಾಡಿದ್ದಾಗಿ ತಾಲಿಬಾನ್ ಹೇಳಿದೆ. ಆದರೆ ಹಕೀಮುಲ್ಲಾ ಕೂಡ ಹತ್ಯೆಯಾಗಿದ್ದು ಅವನ ತದ್ರೂಪಿ ಸೋದರ ನಾಯಕತ್ವ ವಹಿಸಿಕೊಂಡಿದ್ದಾನೆಂಬ ಗುಪ್ತಚರ ವರದಿಗಳಿಂದ ತಾಲಿಬಾನ್ ಸುಳ್ಳಿನ ಸರಪಣಿ ಪೋಣಿಸುತ್ತಿರುವುದು ರುಜುವಾತಾಗಿದೆ.
ಪಾಕಿಸ್ತಾನದಲ್ಲಿ ಗುಂಪಿನ ನೇತೃತ್ವ ವಹಿಸುವಂತೆ ಮೆಹ್ಸೂದ್ ತಪ್ರೂಪಿ ಸೋದರನನ್ನು ಆಫ್ಘಾನಿಸ್ತಾನದಿಂದ ಕರೆಸಿಕೊಳ್ಳಲಾಗಿದೆಯೆಂದು ಒಳಾಡಳಿತ ಸಚಿವಾಲಯ ತಿಳಿಸಿದೆ.