ಕಳೆದ ಎರಡು ದಿನಗಳಿಂದ ಸರ್ಕಾರಿ ಪಡೆಗಳ ಜತೆ ಭೀಕರ ಕಾಳಗದಲ್ಲಿ ವಾಯವ್ಯ ಯೆಮೆನ್‌ನಲ್ಲಿ 100ಕ್ಕೂ ಹೆಚ್ಚು ಬಂಡುಕೋರರು ಸತ್ತಿದ್ದಾರೆಂದು ಸರ್ಕಾರ ಭಾನುವಾರ ತಿಳಿಸಿದೆ. ಡಿಪಿಎಗೆ ಫ್ಯಾಕ್ಸ್ ಮಾಡಲಾದ ಹೇಳಿಕೆಯಲ್ಲಿ, ಅಮ್ರಾನ್ ಪ್ರಾಂತ್ಯದ ಹರ್ಫ್ ಸುಫಿಯಾನ್ ಜಿಲ್ಲೆಯಲ್ಲಿ ಹೌತಿ ಬಂಡುಕೋರ ಗುಂಪಿನ ಇಬ್ಬರು ಕ್ಷೇತ್ರ ಅಧಿಪತಿಗಳು ಕೂಡ ಹತರಾಗಿದ್ದಾರೆಂದು ತಿಳಿಸಿದೆ.
ಹರ್ಫ್ ಸೂಫಿಯಾನ್ ಜಿಲ್ಲೆಯ ಹೊರಗೆ ರಸ್ತೆಯ ಬದಿಗಳಲ್ಲಿ ಹೌತಿಗಳ 100ಕ್ಕೂ ಹೆಚ್ಚು ದೇಹಗಳು ಪತ್ತೆಯಾಗಿದೆಯೆಂದು ಹೇಳಿಕೆ ತಿಳಿಸಿದೆ. ಹತರಾದ ಇಬ್ಬರು ಹೌತಿ ನಾಯಕರು ಮೌಸೀನ್ ಅಲ್ ಖಾವದ್ ಮತ್ತು ಸಲೇ ಜರ್ಮಾನ್ ಎಂದು ಗುರುತಿಸಲಾಗಿದೆ. ಸರ್ಕಾರಿ ಪಡೆಗಳು ಬಂಡುಕೋರರಿಂದ ಜಿಲ್ಲೆಯನ್ನು ಕೈವಶ ಮಾಡಿಕೊಂಡು ಹತೋಟಿ ಸಾಧಿಸಿದ ಬಳಿಕ ದೇಹಗಳು ಪತ್ತೆಯಾಗಿವೆ.
ಏತನ್ಮಧ್ಯೆ ಬಂಡುಕೋರರ ಜತೆ ಹೋರಾಟಕ್ಕೆ ತೆರೆಎಳೆಯಲು ಕದನವಿರಾಮ ಪ್ರಸ್ತಾಪವನ್ನು ಯೆಮೆನಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇ ನವೀಕರಿಸಿದ್ದಾರೆ. ಕದನವಿರಾಮ ಪ್ರಸ್ತಾಪವು, ಸರ್ಕಾರ ಕಳೆದ ವಾರ ಪ್ರಕಟಿಸಿದ 6 ಅಂಶಗಳ ಶಾಂತಿ ಉಪಕ್ರಮದ ಷರತ್ತುಗಳಿಗೆ ಬಂಡುಕೋರರಿಂದ ಬೇಷರತ್ ಬದ್ಧತೆಯನ್ನು ಆಧರಿಸಿದೆಯೆಂದು ಸಲೇ ತಿಳಿಸಿದ್ದಾರೆ.