ಅಥೆನ್ಸ್ ಹೊರವಲಯದಲ್ಲಿ ನಿಯಂತ್ರಣ ಮೀರಿ ವ್ಯಾಪಿಸಿದ ಕಾಳ್ಗಿಚ್ಚಿನಲ್ಲಿ ಅನೇಕ ಮನೆಗಳು ಮತ್ತು ಸಾವಿರಾರು ಎಕರೆ ಅರಣ್ಯ ಪ್ರದೇಶ ಆಹುತಿಯಾಗಿದೆ. ಕಾಳ್ಗಿಚ್ಚಿನ ಬಳಿಕ ಗ್ರೀಕ್ ಅಧಿಕಾರಿಗಳು ತುರ್ತುಪರಿಸ್ಥಿತಿಯನ್ನು ಘೋಷಿಸಿದೆ.
ಗ್ರೀಕ್ ರಾಜಧಾನಿಯ ಈಶಾನ್ಯಕ್ಕೆ 40 ಕಿಮೀ ದೂರದ ಗ್ರಾಮಾಟಿಕೊ ಗ್ರಾಮದಲ್ಲಿ ಶುಕ್ರವಾರ ತಡವಾಗಿ ಕಾಳ್ಗಿಚ್ಚು ವ್ಯಾಪಿಸಿದ್ದು, ನೆರೆಯ ಗ್ರಾಮಗಳಿಗೆ ಕೂಡ ಹರಡಿದೆ ಮತ್ತು ಅಥೆನ್ಸ್ ಉತ್ತರ ಉಪನಗರಗಳಲ್ಲಿ ಕೂಡ ವ್ಯಾಪಿಸುವ ಬೆದರಿಕೆಯೊಡ್ಡಿದೆ. ಗ್ರೀಕ್ ಪ್ರಧಾನಮಂತ್ರಿ ಕೋಸ್ಟಾಸ್ ಕರಾಮನ್ಲೀಸ್ ಅಥೆನ್ಸ್ ಅಗ್ನಿಶಾಮಕ ಕಾರ್ಯಾಚರಣೆ ಕೇಂದ್ರದಲ್ಲಿ ಸಭೆ ನಡೆಸಿ ಬೆಂಕಿಯನ್ನು ನಂದಿಸುವ ಬಗ್ಗೆ ಸಮಾಲೋಚನೆ ನಡೆಸಿದರು.
ತೀವ್ರ ಗಾಳಿಯಿಂದ ಕೂಡಿದ ಬೆಂಕಿಯ ಜ್ವಾಲೆ ಅರಣ್ಯದ ಸಾವಿರಾರು ಎಕರೆ ನೆಲವನ್ನು, ಬೆಳೆ ಬೆಳೆದ ಗದ್ದೆಗಳನ್ನು ಮತ್ತು ಆಲಿವ್ ಮರದ ತೋಪುಗಳನ್ನು ಆವರಿಸಿದ್ದು, ಗ್ರೀಕ್ ರಾಜಧಾನಿಯಲ್ಲಿ ದಟ್ಟವಾಗಿ ಕವಿದ ಹೊಗೆ ಮೋಡ ಆವರಿಸಿತು.