ಪಾಕಿಸ್ತಾನ ತಾಲಿಬಾನ್ ಮುಖಂಡ ಬೈತುಲ್ಲಾ ಮೆಹ್ಸೂದ್ ಬಂಧುಗಳನ್ನು ಅವನ ಬಗ್ಗೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ತಾಲಿಬಾನ್ ಕೊಂದಿದೆಯೆಂದು ಪಾಕ್ ಒಳಾಡಳಿತ ಸಚಿವ ರೆಹ್ಮಾನ್ ಮಲಿಕ್ ತಿಳಿಸಿದ್ದಾರೆ. ಮೆಹ್ಸೂದ್ ಮಾವ ಸೇರಿದಂತೆ ಅವನ ನಾಲ್ವರು ಬಂಧುಗಳನ್ನು ಶನಿವಾರ ತಾಲಿಬಾನ್ ಸೆರೆಹಿಡಿದು ಭಾನುವಾರ ಹತ್ಯೆ ಮಾಡಿದೆಯೆಂದು ಪಾಕಿಸ್ತಾನದ ಮಾಧ್ಯಮ ವರದಿಗಳು ತಿಳಿಸಿವೆ.
ತೆಹ್ರಿಕಿ ತಾಲಿಬಾನ್ ಮಾಜಿ ಮುಖಂಡನ ಉಪಸ್ಥಿತಿ ಬಗ್ಗೆ ಸಿಐಎಗೆ ಸುಳಿವು ನೀಡುವಲ್ಲಿ ಮೆಹ್ಸೂದ್ ಸಂಬಂಧಿಯೆಂದು ಹೇಳಲಾದ ಬಾಡಿಗೆ ಏಜಂಟ್ ನೆರವು ನೀಡಿದ್ದ. ಈ ಸುಳಿವಿನ ಆಧಾರದ ಮೇಲೆ ತಾಲಿಬಾನ್ ನಾಯಕನನ್ನು ಡ್ರೋನ್ ದಾಳಿ ಮೂಲಕ ಅಮೆರಿಕ ಹತ್ಯೆ ಮಾಡಿತ್ತು. ತಾಲಿಬಾನ್ ಬೈತುಲ್ಲಾ ಬಂಧುಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆಯೆಂದು ಅಧಿಕಾರಿಗಳು ಮತ್ತು ಬುಡಕಟ್ಟು ಮೂಲಗಳು ಶನಿವಾರ ತಿಳಿಸಿದ್ದವು. ಬೈತುಲ್ಲಾ ಬೇಟೆಯಾಡುವ ಸಂದರ್ಭದಲ್ಲಿ ಯಾವುದೇ ಹೊಸ ಕಾರ್ಯತಂತ್ರ ಅಳವಡಿಸಿಲ್ಲವೆಂದು ಹೇಳಲಾಗಿದೆ.
ತಾಲಿಬಾನ್ ಮುಖ್ಯಸ್ಥನ ಇರುವಿಕೆ ಬಗ್ಗೆ ಏಜೆಂಟರು ಸುಳಿವು ನೀಡಿದ ಕೂಡಲೇ ಡ್ರೋನ್ ದಾಳಿ ಮೂಲಕ ಹತ್ಯೆ ಮಾಡಲಾಗಿದೆಯೆಂದು ತರಬೇತಿ ಏಜೆಂಟರಿಗೆ ಹತ್ತಿರದ ಅಧಿಕಾರಿಗಳು ಡೇಲಿ ಟೈಮ್ಸ್‌ಗೆ ತಿಳಿಸಿದ್ದಾರೆ. ಮೆಹ್ಸೂದ್‌ನನ್ನು ಡ್ರೋನ್‌ನಲ್ಲಿ ಅಳವಡಿಸಿರುವ ಶಕ್ತಿಶಾಲಿ ಲೆನ್ಸ್ ಮೂಲಕ ಪತ್ತೆಹಚ್ಚಿಲ್ಲ. ಬದಲಿಗೆ ಇಂತಹ ಕಾರ್ಯಾಚರಣೆಗೆ ಸಂಪೂರ್ಣ ನಿಯಮಗಳನ್ನು ಅನುಸರಿಸಲಾಗಿದೆಯೆಂದು ಅಧಿಕಾರಿಗಳು ಹೇಳಿದ್ದಾರೆ.
ಏಜೆಂಟರ ಸೊಂಟಕ್ಕೆ ಬಿಗಿದ ಬೆಲ್ಟ್‌ನಲ್ಲಿ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಅಳವಡಿಸಲಾಗಿದ್ದು, ದಾಳಿ ಮಾಡುವ ಗುರಿಯನ್ನು ಸಮೀಪಿಸಿದ ಕೂಡಲೇ ಉಪಗ್ರಹಕ್ಕೆ ಮಾಹಿತಿ ರವಾನಿಸಲು ಚಿಪ್ ಅದುಮುತ್ತಾನೆ. ಏಜೆಂಟ್ ಸುರಕ್ಷಿತ ಸ್ಥಳಕ್ಕೆ ತೆರಳಿದ ಕೂಡ ಎರಡನೇ ಚಿಪ್ ಅದುಮುತ್ತಾನೆ. ಉಪಗ್ರಹದಿಂದ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನೆಯಾಗುತ್ತದೆ. ಆಗ ಡ್ರೋನ್ ವಿಮಾನಗಳಿಂದ ಕ್ಷಿಪಣಿಗಳನ್ನು ನಿಖರ ಗುರಿ ಮೇಲೆ ದಾಳಿಮಾಡಲಾಗುತ್ತದೆಂದು ಅಧಿಕಾರಿಗಳು ವಿವರಿಸಿದ್ದಾರೆ.