ಬಾರ್‌ನಲ್ಲಿ ಬಿಯರ್ ಹೀರಿದ ಆರೋಪದ ಮೇಲೆ ಛಡಿಯೇಟಿನ ಶಿಕ್ಷೆಗೆ ಗುರಿಯಾಗಿದ್ದ ಮಲೇಶಿಯದ ರೂಪದರ್ಶಿಯೊಬ್ಬರಿಗೆ ಧಾರ್ಮಿಕ ಅಧಿಕಾರಿಗಳು ಛಡಿಯೇಟಿನ ಶಿಕ್ಷೆಯಿಂದ ವಿನಾಯಿತಿ ನೀಡಿದ್ದಾರೆಂದು ಪಹಾಂಗ್ ಇಸ್ಲಾಮಿಕ್ ವ್ಯವಹಾರಗಳ ಇಲಾಖೆಯ ಕಾನೂನು ಜಾರಿ ಮುಖ್ಯಸ್ಥ ಶರಾಫುದ್ದೀನ್ ತಿಳಿಸಿದ್ದಾರೆ.
ಮಲೇಶಿಯದಲ್ಲಿ 32ರ ಪ್ರಾಯದ ಕಾರ್ತಿಕಾ ಸಾರಿ ದೇವಿ ಶುಕರ್ನೊ ಅವರು ಛಡಿಯೇಟಿನ ಶಿಕ್ಷೆಗೆ ಗುರಿಯಾಗಲಿರುವ ಪ್ರಥಮ ಮಹಿಳೆಯಾಗಿದ್ದರು. ಹೊಟೆಲ್‌ನ ರಾತ್ರಿ ಕ್ಲಬ್ಬೊಂದರಲ್ಲಿ ಕಳೆದ ವರ್ಷ ಬಿಯರ್ ಕುಡಿದಿದ್ದೇನೆಂದು ಒಪ್ಪಿಕೊಂಡಿದ್ದ ಶುಕಾರ್ನೊಗೆ 6 ಬಾರಿ ಛಡಿಯೇಟಿನ ಶಿಕ್ಷೆಯನ್ನು ಜಾರಿ ಮಾಡಲಾಗಿತ್ತು. ಕಳೆದ ತಿಂಗಳು ತೀರ್ಪಿನ ಪ್ರತಿಯನ್ನು ಹಸ್ತಾಂತರಿಸಿದಾಗ ಕಾರ್ತಿಕ ಮನಸಾರೆ ಅತ್ತಿದ್ದರು.
ಕುಟುಂಬದ ಗೌರವಕ್ಕೆ ಕಳಂಕ ತಂದಿದ್ದಕ್ಕಾಗಿ ತಮಗೆ ತೀವ್ರ ನೋವಾಗಿದೆ. ಆದರೆ ಕುರಾನ್ ಓದುವುದರಲ್ಲಿ ಸಮಯ ವ್ಯಯಿಸಿದ ಬಳಿಕ ತಾವು ನಿರಾಳವಾಗಿದ್ದಾಗಿ ಅವರು ಹೇಳಿದ್ದರು. ಈಗ ಛಡಿಯೇಟಿನ ಶಿಕ್ಷೆಯಿಂದ ಮಹಿಳೆಗೆ ಧಾರ್ಮಿಕ ಅಧಿಕಾರಿಗಳು ವಿನಾಯಿತಿ ನೀಡಿದ್ದಾರೆ.