ವಾಯವ್ಯ ಪಾಕಿಸ್ತಾನದ ಕಾನೂನುರಹಿತ ಬುಡಕಟ್ಟು ವಲಯದಲ್ಲಿ ಬಂದೂಕುಧಾರಿಗಳು ಆಪ್ಘನ್ ಪತ್ರಕರ್ತರೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಯಾಣಿಕರ ಕೋಚ್‌ನಲ್ಲಿ 40 ವರ್ಷ ವಯಸ್ಸಿನ ಜಾನುಲ್ಲಾ ಹಶ್ಮಿಜಾದಾ ವಾಪಸು ಬರುವಾಗ ಖೈಬರ್ ಬುಡಕಟ್ಟು ಜಿಲ್ಲೆಯಲ್ಲಿ ಉಗ್ರಗಾಮಿಗಳು ವಾಹನಕ್ಕೆ ಮುತ್ತಿಗೆ ಹಾಕಿ ನಿಲ್ಲಿಸಿದ ಅಜ್ಞಾತ ಬಂದೂಕುಧಾರಿಗಳು ಪತ್ರಕರ್ತನನ್ನು ಹೊರಕ್ಕೆಳೆದು ಗುಂಡು ಹಾರಿಸಿ ಕೊಂದರು.
ಆಫ್ಘನ್ ಟೆಲಿವಿಷನ್ ಚಾನೆಲ್ ಶಮ್ಶಾದ್ ಮತ್ತು ಇತರೆ ಮಾಧ್ಯಮ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿದ್ದ ಹಶೀಮ್ ಜಾದಾ ಹತ್ಯೆಗೆ ಪ್ರಚೋದನೆ ಏನೆಂಬುದನ್ನು ಅಧಿಕಾರಿ ತಿಳಿಸಿಲ್ಲ. ವಾಯವ್ಯ ಪಾಕಿಸ್ತಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ 6 ಪತ್ರಕರ್ತರು ಹತರಾಗಿದ್ದಾರೆಂದು ವಿಯೆನ್ನಾ ಮೂಲದ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಇದಕ್ಕೆ ಮುಂಚಿತವಾಗಿ ತಿಳಿಸಿದ್ದು, ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯೆಂದು ಹಣೆಪಟ್ಟಿ ನೀಡಿತ್ತು.
ಆಫ್ಘಾನಿಸ್ತಾನದಲ್ಲಿ ಅಮೆರಿಕ ನೇತೃತ್ವದಲ್ಲಿ ದಾಳಿ ನಡೆದ ಬಳಿಕ ನೂರಾರು ತಾಲಿಬಾನ್ ಮತ್ತು ಅಲ್ ಖಾಯಿದಾ ಬಂಡುಕೋರರು ಪಾಕಿಸ್ತಾನದ ಅರೆಸ್ವಾಯತ್ತ ಪ್ರದೇಶದಲ್ಲಿ ಆಶ್ರಯ ಪಡೆದ ಹಿನ್ನೆಲೆಯಲ್ಲಿ ಅದು ಹಿಂಸಾಚಾರದಿಂದ ತತ್ತರಿಸಿ ಹೋಗಿದೆ.