ಈಜುಡುಪಿನ ರೂಪದರ್ಶಿಯಾದ ತನ್ನ ಮಾಜಿ ಪತ್ನಿಯನ್ನು ಅಮೆರಿಕದಲ್ಲಿ ಹತ್ಯೆ ಮಾಡಿದ್ದಾನೆಂದು ಶಂಕಿಸಲಾದ ರಿಯಾಲಿಟಿ ಟಿವಿ ಸ್ಪರ್ಧಿಯೊಬ್ಬ ಕೆನಡಾದ ಹೊಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 28 ವರ್ಷ ಪ್ರಾಯದ ಪತ್ನಿ ಲಾಸ್ ಏಂಜಲ್ಸ್‌ನ ಜಾಸ್ಮಿನ್ ಫಿಯೋರಾ ಅವರನ್ನು ಭೀಕರವಾಗಿ ಹತ್ಯೆ ಮಾಡಿದ ಬಳಿಕ ರಯಾನ್ ಅಲೆಕ್ಸಾಂಡರ್ ಜೆನ್‌ಕಿನ್ಸ್ ಮೇಲೆ ಅಮೆರಿಕದಲ್ಲಿ ಹತ್ಯೆ ಆರೋಪವನ್ನು ಹೊರಿಸಲಾಗಿತ್ತು.
ರೂಪದರ್ಶಿಯ ಛಿದ್ರ,ಛಿದ್ರವಾದ ದೇಹ ಒಂದುವಾರದ ಕೆಳಗೆ ಕಸದ ತೊಟ್ಟಿಯೊಂದರಲ್ಲಿದ್ದ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ರೂಪದರ್ಶಿಯ ಬೆರಳುಗಳು ಮತ್ತು ಹಲ್ಲುಗಳನ್ನು ಕಿತ್ತುಹಾಕಲಾಗಿದ್ದು, ಸ್ತನದ ಶಸ್ತ್ರಚಿಕಿತ್ಸೆ ನಡೆಸಿದ ಕ್ರಮಬದ್ಧ ಸಂಖ್ಯೆಯಿಂದ ಅವರನ್ನು ಗುರುತಿಸಲಾಗಿತ್ತು. ಜೆನ್‌ಕಿನ್ಸ್ ಕೆನಡಾ ಪೌರನಾಗಿದ್ದು, 'ಮೆಗಾನ್ ವಾಂಟ್ಸ್ ಎ ಮಿಲಿಯನರ್' ವಿಎಚ್1 ಟೆಲಿವಿಷನ್ ಷೋನಲ್ಲಿ 16 ಇತರೆ ಸ್ಪರ್ಧಿಗಳ ಜತೆ ಕಾಣಿಸಿಕೊಂಡಿದ್ದರು.
ಪತ್ನಿಯ ಹತ್ಯೆಯ ಶಂಕಿತನಾಗಿದ್ದ ಅವನಿಗಾಗಿ ವ್ಯಾಪಕ ಶೋಧ ನಡೆಸಲಾಗಿತ್ತೆಂದು ಬ್ಯೂನಾ ಪಾರ್ಕ್ ಪೊಲೀಸ್ ಮುಖ್ಯಸ್ಥ ಟಾಮ್ ಮಾನ್‌ಸನ್ ತಿಳಿಸಿದ್ದಾರೆ. ಫಿಯೋರಾ ಕಾಣೆಯಾಗಿದ್ದಾಳೆಂದು ಸ್ವತಃ ಜೆನ್‌ಕಿನ್ಸ್ ಪೊಲೀಸರಿಗೆ ದೂರು ನೀಡಿದ್ದ. ಬಳಿಕ ಪುನರ್‌ಬಳಕೆ ಸೀಸಿಗಳಿಗೆ ವ್ಯಕ್ತಿಯೊಬ್ಬ ಕಸದ ತೊಟ್ಟಿಯಲ್ಲಿ ಹುಡುಕುತ್ತಿದ್ದಾಗ ಆಕೆಯ ದೇಹವಿದ್ದ ಸೂಟ್‌ಕೇಸ್ ಪತ್ತೆಯಾಗಿತ್ತು.