ಎಲ್‌ಟಿಟಿಇ ಬಂಡುಕೋರರು ಶ್ರೀಲಂಕಾ ಸೇನೆಯ ಮೇಲೆ ಪ್ರಯೋಗಿಸಲು ಅಣ್ವಸ್ತ್ರಗಳನ್ನು ಹೊಂದುವ ಪ್ರಯತ್ನ ನಡೆಸಿತೆಂದು ಬಂಧಿತ ಎಲ್‌ಟಿಟಿಇ ಮುಖಂಡ ಕುಮಾರನ್ ಪದ್ಮನಾಥನ್ ತನಿಖೆದಾರರಿಗೆ ಬಹಿರಂಗಪಡಿಸುವ ಮೂಲಕ ಚಕಿತಗೊಳಿಸಿದ್ದಾನೆ. ಥಾಯ್ಲೆಂಡಿನಲ್ಲಿ ಇತ್ತೀಚೆಗೆ ಬಂಧಿತರಾದ ಪದ್ಮನಾಥನ್, ತನ್ನ ಸಂಘಟನೆಯು ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಅಣ್ವಸ್ತ್ರ ಮತ್ತು ಅದರ ತಂತ್ರಜ್ಞಾನ ಸಂಪಾದಿಸಲು ಯತ್ನಿಸಿತೆಂದು ತನಿಖೆದಾರರಿಗೆ ತಿಳಿಸಿದ್ದಾನೆ.
ಅಣ್ವಸ್ತ್ರ ಶಕ್ತಿಯನ್ನು ಸಂಪಾದಿಸಲು ಪ್ರಯತ್ನಿಸಿದ ಮೊದಲನೇ ಭಯೋತ್ಪಾದಕ ಸಂಘಟನೆ ಎಲ್‌ಟಿಟಿಇ. ಅಣ್ವಸ್ತ್ರವನ್ನು ಕೈವಶಮಾಡಿಕೊಳ್ಳುವಲ್ಲಿ ಎಲ್‌ಟಿಟಿಇ ಯಶಸ್ವಿಯಾಗಿದ್ದರೆ, ಅದರ ತಂತ್ರಜ್ಞಾನ ಇತರೆ ಭಯೋತ್ಪಾದಕ ಸಂಘಟನೆಗಳ ಕೈಗೆ ಹರಿದುಹೋಗುತ್ತಿತ್ತೆಂದು ಮಿಲಿಟರಿ ವಿಶ್ಲೇಷಕರನ್ನು ಉಲ್ಲೇಖಿಸಿ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ. ಸಂಗ್ರಹವಾದ ಹಣದಿಂದ ಖರೀದಿಸಿದ ಶಸ್ತ್ರಾಸ್ತ್ರವನ್ನು ಎಲ್‌ಟಿಟಿಇಗೆ ರವಾನಿಸಿದ್ದಾಗಿ ಪದ್ಮನಾಥನ್ ಹೇಳಿದ್ದಾನೆ.
ಅಮೆರಿಕ ಶಸ್ತ್ರಾಸ್ತ್ರ ಮಾರಾಟಗಾರರಿಂದ ಅವನು ಹೇಗೆ ವಿಮಾನ ನಿಗ್ರಹ ಕ್ಷಿಪಣಿಗಳನ್ನು ಖರೀದಿಸಿದನೆಂಬುದನ್ನು ಬಹಿರಂಗಪಡಿಸಿದ್ದಾನೆಂದು ಸುದ್ದಿಪತ್ರಿಕೆ ಬಹಿರಂಗ ಮಾಡಿದೆ. ಏತನ್ಮಧ್ಯೆ, ಎಲ್‌ಟಿಟಿಇ ಪ್ರಭಾಕರನ್ ಮಾಜಿ ಕಮಾಂಡರ್ ಮತ್ತು ಪ್ರಸಕ್ತ ಕ್ಯಾಬಿನೆಟ್ ಸಚಿವರಾಗಿರುವ ಕರುಣಾ ಅಮ್ಯಾನ್, ಪದ್ಮನಾಥನ್‌ಗೆ ಉತ್ತರಾಧಿಕಾರಿಯನ್ನು ಹುಡುಕುವುದು ಕಷ್ಟವೆಂದು ಹೇಳಿದ್ದಾರೆ. ಎಲ್ಲ ಅಂತಾರಾಷ್ಟ್ರೀಯ ಜಾಲಗಳ ಮೇಲೆ ಕೆಪಿ ಹಿಡಿತ ಹೊಂದಿದ್ದರಿಂದ ಎಲ್‌ಟಿಟಿಇಗೆ ಏನೂ ಮಾಡಲು ಸಾಧ್ಯವಿಲ್ಲವಾಗಿದೆಯೆಂದು ಅಮ್ಮಾನ್ ತಿಳಿಸಿದ್ದಾರೆ.