ಲಾಸ್ ಏಂಜಲ್ಸ್, ಮಂಗಳವಾರ, 25 ಆಗಸ್ಟ್ 2009( 12:24 IST )
ಮೈಕೇಲ್ ಜಾಕ್ಸನ್ ಶಕ್ತಿಶಾಲಿ ಅರಿವಳಿಕೆಯ ಡೋಸ್ ನೀಡಬೇಕೆಂದು ತನ್ನ ಕಡೆಯ ದಿನಗಳಲ್ಲಿ ತೀವ್ರ ಅಲವತ್ತುಕೊಂಡರೆಂದು ಜಾಕ್ಸನ್ ವೈದ್ಯರು ಪೊಲೀಸರಿಗೆ ತಿಳಿಸಿದ್ದಾಗಿ ಸೋಮವಾರ ಹೊರತೆಗೆದ ಕೋರ್ಟ್ ದಾಖಲೆಗಳು ತಿಳಿಸಿವೆ. ಜಾಕ್ಸನ್ ಪ್ರೊಪೊಫೋಲ್‌ನ ಅಪಾಯಕಾರಿ ಚಟ ಬೆಳೆಸಿಕೊಂಡಿರಬಹುದೆಂಬ ಭಯದಿಂದ ಸುಮಾರು 6 ಗಂಟೆಗಳವರೆಗೆ ಡಾ. ಕಾರ್ನಾಡ್ ಮರ್ರೆ ನಿರಾಕರಿಸಿದರು.
ಅದಕ್ಕೆ ಬದಲಾಗಿ ಮರ್ರೆ ನೋವುನಿವಾರಕಗಳಾದ ವೇಲಿಯಂ, ಲೋರಾಜೇಪಂ ಮತ್ತು ಮಿಡಾಜೋಲಂಗಳನ್ನು 5 ಬಾರಿ ನೀಡಿದ್ದರು. ಆದರೆ ಇದಾವುದೂ ಜಾಕ್ಸನ್ ಅವರಿಗೆ ನಿದ್ರೆ ಬರಿಸದಿದ್ದರಿಂದ ಜಾಕ್ಸನ್ ಪ್ರೋಪೊಫೋಲ್‌ಗೆ ಬಳಸುವ ಅಡ್ಡಹೆಸರಾದ 'ಮಿಲ್ಕ್' ನೀಡುವಂತೆ ಒತ್ತಾಯಿಸಿದರೆಂದು ಮರ್ರೆ ತಿಳಿಸಿದ್ದಾರೆ.ಅಂತಿಮವಾಗಿ ಮಣಿದ ಮರ್ರೆ 10.40 ಗಂಟೆಗೆ ಜಾಕ್ಸನ್ ಡ್ರಿಪ್‌ನಲ್ಲಿ ಪ್ರೊಪೊಫೋಲ್ ಔಷಧಿ ಬೆರೆಸಿದರೆಂದು ದಾಖಲೆಗಳು ತಿಳಿಸಿವೆ.
ಇತರೆ ನೋವುನಿವಾರಕಗಳ ಕಾಕ್‌ಟೇಲ್ ಜತೆ ಮಿಶ್ರಣವಾಗಿದ್ದ ಈ ಡೋಸ್ ಪಾಪ್ ತಾರೆಯನ್ನು ಕೊಲ್ಲುವಷ್ಟು ಶಕ್ತವಾಗಿತ್ತೆಂದು ಲಾಸ್ ಏಂಜಲ್ಸ್ ಕೌಂಟಿ ಕೊರೊನರ್ ಕಚೇರಿ ತನ್ನ ಆರಂಭಿಕ ವಿಷಸೇವನೆ ಪರೀಕ್ಷೆ ವರದಿಯಲ್ಲಿ ತಿಳಿಸಿದೆ. ಈ ದಾಖಲೆ ಜಾಕ್ಸನ್ ಸಾವಿನ ತನಿಖೆಯಲ್ಲಿ ಅವರ ಸಾವಿಗೆ ಕಾರಣವೇನೆಂಬ ಮುಖ್ಯ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಜಾಕ್ಸನ್ ದೇಹದಲ್ಲಿ ಮಾರಣಾಂತಿಕ ಮಟ್ಟದಲ್ಲಿ ಪ್ರೊಪೊಫೋಲ್ ಪತ್ತೆಯಾಗಿದೆಯೆಂದು ಕೋರೊನರ್ಸ್ ಕಚೇರಿ ಆರಂಭಿಕ ವರದಿಯಲ್ಲಿ ತಿಳಿಸಿದೆಯೆಂದು ದಾಖಲೆಗಳು ಬಯಲುಮಾಡಿವೆ.
ಜಾಕ್ಸನ್ ಅಂತಿಮ ಗಳಿಗೆಗಳ ಘಟನಾವಳಿಗಳ ವಿವರಗಳನ್ನು ದಾಖಲೆಗಳು ಒದಗಿಸಿವೆ. ಪಾಪ್ ತಾರೆ ಔಷಧಿಗಳ ಚಟ ಬೆಳೆಸಿಕೊಂಡಿದ್ದಾರೆಂಬ ಶಂಕೆಯ ನಡುವೆಯೂ ಮರ್ರೆ ಆ ಔಷಧಿಗಳನ್ನು ನೀಡುವ ದುರ್ದೈವದ ನಿರ್ಧಾರ ಕೈಗೊಂಡಿದ್ದನ್ನು ದಾಖಲೆ ಬಹಿರಂಗ ಮಾಡಿದೆ. ಜಾಕ್ಸನ್ ಸಾವಿನ ಬಳಿಕ ಲಾಸ್ ಏಂಜಲ್ಸ್ ಪೊಲೀಸರ ಜತೆ ಮರ್ರೆ ಮೂರು ಗಂಟೆಗಳ ಮಾತುಕತೆಯ ಆಧಾರದ ಮೇಲೆ ಈ ಸಂಗತಿಯನ್ನು ಹೆಣೆಯಲಾಗಿದೆ.