ಮಾಜಿ ಪ್ರಧಾನಮಂತ್ರಿ ಬೆನಜೀರ್ ಭುಟ್ಟೊ ಮೇಲೆ ಮಾರಣಾಂತಿಕ ದಾಳಿ ಬಳಿಕ ಅವರನ್ನು ದಾಖಲು ಮಾಡಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿದ ವಿಶ್ವಸಂಸ್ಥೆಯ ತಂಡವೊಂದು ಅವರಿಗುಂಟಾದ ಗಾಯಗಳು ಮತ್ತು ಚಿಕಿತ್ಸೆ ಬಗ್ಗೆ ವಿವರಗಳನ್ನು ಸಂಗ್ರಹಿಸಿತೆಂದು ಆನ್‌ಲೈನ್ ಏಜೆನ್ಸಿ ವರದಿ ಮಾಡಿದೆ. ವಿಶ್ವಸಂಸ್ಥೆ ಅಧಿಕಾರಿಗಳು ಬೆನಜೀರ್ ಶಹೀದ್ ಆಸ್ಪತ್ರೆಯ ಸಿಬ್ಬಂದಿ ಜತೆ ಸುಮಾರು ಎರಡು ಗಂಟೆಗಳ ಕಾಲ ವಿಚಾರವಿನಿಮಯ ನಡೆಸಿದರೆಂದು ವರದಿ ಹೇಳಿದೆ.
ಶಸ್ತ್ರಚಿಕಿತ್ಸೆ ಕೋಣೆಗೆ,ಚಿಕಿತ್ಸೆ ಕೋಣೆ ಮತ್ತು ವೈದ್ಯರು ಔಪಚಾರಿಕವಾಗಿ ಭುಟ್ಟೊ ಸಾವನ್ನು ಪ್ರಕಟಿಸಿದ ಸ್ಥಳವನ್ನು ಕೂಡ ತಂಡ ಭೇಟಿ ಮಾಡಿತು. 7 ಸದಸ್ಯರ ವಿಶ್ವಸಂಸ್ಥೆ ತಂಡವು ಕಳೆದ ವಾರ ಭುಟ್ಟೊ ಹತ್ಯೆಯ ಸಂದರ್ಭಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇಸ್ಲಾಮಾಬಾದ್‌ಗೆ ಆಗಮಿಸಿದೆ.
ಜುಲೈ 1ರಂದು ತಂಡವು ತನಿಖೆ ಆರಂಭಿಸಿದ್ದು, ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್ ಕಿ ಮೂನ್ ಅವರಿಗೆ ತನಿಖೆ ಪೂರ್ಣಗೊಳಿಸಿದ ಬಳಿಕ ವರದಿ ಸಲ್ಲಿಸಲಿದೆ. ಬಾನ್ ಬಳಿಕ ವರದಿಯನ್ನು ಕುರಿತು ಪಾಕಿಸ್ತಾನ ಸರ್ಕಾರ ಮತ್ತು ಭದ್ರತಾಮಂಡಳಿ ಜತೆ ಹಂಚಿಕೊಳ್ಳಲಿದ್ದಾರೆ.