ಎರಡು ವಾರಗಳ ಕೆಳಗೆ ಮೊರಾಕೊಟ್ ಚಂಡಮಾರುತ ಅಪ್ಪಳಿಸಿದ ಬಳಿಕ ಸುಮಾರು 254 ಜನರು ನಾಪತ್ತೆಯಾಗಿದ್ದು, 376 ಜನರು ಸತ್ತಿದ್ದಾರೆಂದು ದೃಢಪಟ್ಟಿರುವುದಾಗಿ ತೈವಾನ್ ಸರ್ಕಾರ ಮಂಗಳವಾರ ತಿಳಿಸಿದೆ.
ಚಂಡಮಾರುತಕ್ಕೆ ತೀವ್ರ ಹಾನಿಗೀಡಾದ ಸಿಯಾಲಿನ್‌ನಲ್ಲಿ 238 ಜನರು ಸತ್ತಿರುವುದು ದೃಢಪಟ್ಟಿದೆ. ಇನ್ನೂ 60 ದೇಹಗಳು ಮತ್ತು ದೇಹದ ಭಾಗಗಳನ್ನು ಗುರುತಿಸಬೇಕಿರುವುದರಿಂದ ಸತ್ತವರ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಹೇಳಲಾಗಿದೆ.
ಈ ತಿಂಗಳ ಆದಿಯಲ್ಲಿ ಚಂಡಮಾರುತ ದ್ವೀಪಕ್ಕೆ ಅಪ್ಪಳಿಸಿದ್ದು, 118 ಇಂಚು ದಾಖಲೆಯ ಮಳೆಯನ್ನು ಸುರಿಸಿದೆ. ಮಳೆಯಿಂದಾಗಿ ಮನೆಗಳು ಮುಳುಗಿದ್ದು, ಬೀದಿಗಳು ಮತ್ತು ಸೇತುವೆಗಳು ನಾಶವಾಗಿವೆ.
ಮೊರಾಕಾಟ್ ತೈವಾನ್‌ನನ್ನು ಅಪ್ಪಳಿಸಿದ ಭೀಕರ ಚಂಡಮಾರುತವೆಂದು ಅಧ್ಯಕ್ಷ ಮಾ ಯಿಂಗ್ ಜಿಯಸ್ ತಿಳಿಸಿದ್ದು, 1959ರ ಚಂಡಮಾರುತಕ್ಕಿಂತ ಹಾನಿಯ ಪ್ರಮಾಣ ಹೆಚ್ಚಾಗಿದೆಯೆಂದು ತಿಳಿಸಿದ್ದಾರೆ.ತೈವಾನ್‌ನಲ್ಲಿ 1999ರ ಸೆಪ್ಟೆಂಬರ್‌ನಲ್ಲಿ ಅಪ್ಪಳಿಸಿದ 7.6 ತೀವ್ರತೆಯ ಭೂಕಂಪಕ್ಕೆ 2400 ಜನರು ಬಲಿಯಾಗಿದ್ದು ಇತಿಹಾಸದಲ್ಲೇ ನಿಸರ್ಗ ವಿಕೋಪದ ಮಾರಕ ದುರಂತವೆನಿಸಿದೆ.