ತಾಲಿಬಾನ್ ಮುಖಂಡ ಬೈತುಲ್ಲಾ ಮೆಹ್ಸೂದ್ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತನಾಗಿದ್ದಾನೆಂಬ ವರದಿಗಳನ್ನು ನಿರಾಕರಿಸುತ್ತಿದ್ದ ತಾಲಿಬಾನ್ ಈಗ ಮೆಹ್ಸೂದ್ ಸತ್ತಿದ್ದಾನೆಂದು ದೃಢಪಡಿಸಿದೆ. ಪಾಕಿಸ್ತಾನ ತಾಲಿಬಾನ್ ಇಬ್ಬರು ಕಮಾಂಡರ್‌ಗಳು ಬೈತುಲ್ಲಾ ಮೆಹ್ಸೂದ್ ಸತ್ತಿದ್ದಾನೆಂಬುದನ್ನು ದೃಢಪಡಿಸಿದ್ದಾರೆ. ಅಮೆರಿಕದ ಕ್ಷಿಪಣಿ ದಾಳಿಯಿಂದ ತೀವ್ರ ಗಾಯಗಳಾಗಿ ಅವನು ಸತ್ತಿದ್ದಾನೆಂದು ಅವರು ತಿಳಿಸಿದ್ದಾರೆ.
ಮೆಹ್ಸೂದ್ ಇಬ್ಬರು ಉನ್ನತ ಡೆಪ್ಯೂಟಿಗಳ ಹೇಳಿಕೆಗಳಿಂದ ತಾಲಿಬಾನ್ ಮೆಹ್ಸೂದ್ ಸಾವನ್ನು ಮೊದಲ ಬಾರಿಗೆ ಒಪ್ಪಿಕೊಂಡಂತಾಗಿದೆ. ಆಗಸ್ಟ್ 5 ರಂದು ಆಫ್ಘನ್ ಗಡಿಯ ಬಳಿ ನಡೆದ ಕ್ಷಿಪಣಿ ದಾಳಿಯಲ್ಲಿ ಮೆಹ್ಸೂದ್ ಹತನಾಗಿದ್ದಾನೆಂದು ವರದಿಯಾಗಿತ್ತು.ಆದರೆ ಮೆಹ್ಸೂದ್ ಅಸ್ವಸ್ಥತೆಗೀಡಾಗಿದ್ದು, ಅವನ ಜೀವಿತಾವಧಿಯಲ್ಲೇ ತಾಲಿಬಾನ್‌ಗೆ ಬದಲಿ ನಾಯಕನನ್ನು ನೇಮಿಸಬೇಕೆಂದು ಹೇಳಿದ್ದರಿಂದ ಹಕೀಮುಲ್ಲಾನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾಗಿ ತಾಲಿಬಾನ್ ಮುಖಂಡರು ಹೇಳಿದ್ದರು.
ಆದರೆ ಹಕೀಮುಲ್ಲಾ ಮೆಹ್ಸೂದ್ ಮತ್ತು ವಾಲಿಯುರ್ ರೆಹ್ಮಾನ್ ಸುದ್ದಿ ಏಜೆನ್ಸಿಗೆ ಕರೆ ಮಾಡಿ, ಮೆಹ್ಸೂದ್ ಸತ್ತಿದ್ದಾನೆಂದು ದೃಢಪಡಿಸುವ ಮೂಲಕ ಮೆಹ್ಸೂದ್ ಸಾವಿನ ಸುತ್ತ ಆವರಿಸಿದ್ದ ವಿವಾದ ಕೊನೆಗೊಂಡಿದೆ. ಬೈತುಲ್ಲಾ ಮೆಹ್ಸೂದ್ ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡಿದ್ದು ಭಾನುವಾರ ಸತ್ತಿದ್ದಾನೆಂದು ಅವರಿಬ್ಬರು ತಿಳಿಸಿದ್ದಾರೆ.