ಆಫ್ಘಾನಿಸ್ತಾನದಲ್ಲಿ ಚುನಾವಣೆಯ ಮತಎಣಿಕೆ ನಡೆಯುತ್ತಿರುವ ನಡುವೆ, ಕಂದಹಾರ್‌ನಲ್ಲಿ ಭಯೋತ್ಪಾದಕರು ಐದು ಕಾರ್ ಬಾಂಬ್‌ಗಳನ್ನು ಏಕಕಾಲದಲ್ಲಿ ಬುಧವಾರ ಸ್ಪೋಟಿಸಿದ್ದರಿಂದ 42 ಜನರು ಅಸುನೀಗಿದ್ದಾರೆ. ರಾತ್ರಿ ಕತ್ತಲು ಕವಿಯುತ್ತಿದ್ದಂತೆ ಸ್ಫೋಟದ ರಭಸಕ್ಕೆ ಕಟ್ಟಡಗಳು ನೆಲಸಮವಾದವು, ಕಿಟಕಿಗಳು ಅದುರಿದವು ಮತ್ತು ದಟ್ಟವಾದ ಜ್ವಾಲೆ ಆಕಾಶದಲ್ಲಿ ಹರಡಿತು.
ಸ್ಫೋಟದಿಂದ ಅನೇಕ ಮನೆಗಳು ಮತ್ತು ಸಮೀಪದ ಕಟ್ಟಡಗಳು ಉರುಳಿಬಿದ್ದಿದ್ದರಿಂದ ಸತ್ತವರ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಕನಿಷ್ಠ 66 ಜನರು ಗಾಯಗೊಂಡಿದ್ದಾರೆಂದು ಜನರಲ್ ಗುಲಾಂ ಅಲಿ ವಹಾಬತ್ ತಿಳಿಸಿದ್ದಾರೆ. ಪಾಕಿಸ್ತಾನಿ ಎಂಜಿನಿಯರ್‌ಗಳು ಬಹುತೇಕ ಮಂದಿ ಕೆಲಸ ಮಾಡುತ್ತಿದ್ದ ಜಪಾನಿನ ಕಟ್ಟಡ ನಿರ್ಮಾಣ ಕಂಪೆನಿಯೊಂದರ ಮೇಲೆ ಉಗ್ರಗಾಮಿಗಳು ಗುರಿಯಿರಿಸಿದ್ದರೆಂದು ಹೇಳಲಾಗಿದ್ದು, ಕಂಪೆನಿಯ ಮುಖ್ಯಕಚೇರಿ ಕುಸಿದುಬಿದ್ದಿದ್ದು, ಸಮೀಪದ ವಿವಾಹ ಮಂದಿರದ ಒಂದು ಭಾಗ ನಾಶವಾಗಿದೆಯೆಂದು ಸ್ಥಳದಲ್ಲಿದ್ದ ಎಪಿ ವರದಿಗಾರ ತಿಳಿಸಿದ್ದಾರೆ.
ಕಂದಹಾರ್‌ನಲ್ಲಿ ಸುಮಾರು 8 ವರ್ಷಗಳಿಂದ ವಾಸಿಸುತ್ತಿರುವ ಎಪಿ ವರದಿಗಾರ, ತಾನು ಇದುವರೆಗೆ ಕಂಡಿರುವ ಭೀಕರ ಸ್ಫೋಟಗಳಲ್ಲೊಂದು ಎಂದು ಬಣ್ಣಿಸಿದ್ದಾರೆ. ಸುಮಾರು 40 ಅಂಗಡಿಗಳು ನೆಲಸಮವಾಗಿದ್ದು, ಮತ್ತೊಮ್ಮೆ ಉಗ್ರರು ಮುಗ್ಧ ಮಕ್ಕಳು, ಮಹಿಳೆಯರು ಸೇರಿದಂತೆ ಆಫ್ಘನ್ನರನ್ನು ಕೊಂದಿದ್ದಾರೆ. ಅವರಲ್ಲಿ ಮನುಷ್ಯತ್ವವೇ ಇಲ್ಲ. ಈ ಶತ್ರುವಿನ ನಾಶವನ್ನು ನೀವು ಕಣ್ಣಾರೆ ಕಾಣಲಿರುವಿರಿ ಎಂದು ಡೆಪ್ಯುಟಿ ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಮೊಹಮದ್ ಶೇರ್ ಶಾ ತಿಳಿಸಿದ್ದಾರೆ.