ಅಮೆರಿಕದ ಪ್ರಮುಖ ಡೆಮಾಕ್ರಾಟ್ ಸೆನೆಟ್ ಸದಸ್ಯ ಎಡ್ವರ್ಡ್ ಮೂರ್ ಕೆನಡಿ ಬುಧವಾರ ಮೆದುಳು ಕ್ಯಾನ್ಸರ್ ಜತೆ ಸಾವು, ಬದುಕಿನ ಸುದೀರ್ಘ ಹೋರಾಟ ನಡೆಸಿದ ಬಳಿಕ ಮೃತಪಟ್ಟಿದ್ದಾರೆ.
ಸೆನೆಟ್‌ನ ಲಿಬರಲ್ ಲಯನ್ ಎಂದೇ ಅನೇಕ ಮಂದಿ ಪರಿಗಣಿಸಿದ್ದ ಎಡ್ವರ್ಡ್ ಕೆನಡಿ ಮೃತಪಟ್ಟಾಗ 77 ವರ್ಷ ವಯಸ್ಸಾಗಿತ್ತು ಮತ್ತು ಪ್ರಖ್ಯಾತ ಕೆನಡಿ ಮನೆತನದ ಕೊನೆಯವರೆಂದು ಹೇಳಲಾಗಿದೆ. ಸ್ವತಃ ಆರೋಗ್ಯ ಹದಗೆಟ್ಟಿದ್ದರಿಂದ ಆರೋಗ್ಯ ಸೇವೆಯ ಹೋರಾಟದಿಂದ ಅಸ್ವಸ್ಥ ಸೆನೆಟರ್ ಗೈರುಹಾಜರಿಯಾಗಿದ್ದರು. 2008ರಲ್ಲಿ ಅವರು ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿರುವುದನ್ನು ಪತ್ತೆಹಚ್ಚಲಾಗಿತ್ತು.
ಮಾಸ್‌ನ ಹಯಾನಿಸ್ ಪೋರ್ ಮನೆಯಲ್ಲಿ ಕೆನಡಿ ನಿಧನರಾದರೆಂದು ಕೆನಡಿ ಕುಟುಂಬ ವರ್ಗ ತಿಳಿಸಿದೆ. ಸುಮಾರು ಐದು ದಶಕಗಳ ಕಾಲ ಎಡ್ವರ್ಡ್ ಕೆನಡಿ ತಮ್ಮ ಕುಟುಂಬ ರಾಜಕೀಯ ಪರಂಪರೆಯನ್ನು ರಕ್ಷಿಸಿದ್ದರು.ಟೆಡ್ಡಿ ಎಂದೇ ಜನಪ್ರಿಯರಾಗಿದ್ದ ಎಡ್ವರ್ಡ್ ಕೆನಡಿ 1963ರಲ್ಲಿ ಹತ್ಯೆಯಾದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿಯವರ ಸೋದರ.