ತಮಿಳು ವ್ಯಾಘ್ರ ಬಂಡುಕೋರರ ವಿರುದ್ಧ ಶ್ರೀಲಂಕಾ ಸೇನೆಯ ಅಂತಿಮ ಹಂತಗಳ ಹೋರಾಟದ ಸಂದರ್ಭದಲ್ಲಿ ಸೇನಾಪಡೆಗಳು ಸೆರೆಸಿಕ್ಕ ಕೈದಿಗಳಿಗೆ ಗುಂಡಿಕ್ಕಿ ಸಾಯಿಸುತ್ತಿರುವ ಅಮಾನವೀಯ ಕ್ರೌರ್ಯದ ದೃಶ್ಯಗಳನ್ನು ತೋರಿಸಿದ ವಿಡಿಯೊ ಕ್ಲಿಪ್ ಪ್ರಸಾರವನ್ನು ಶ್ರೀಲಂಕಾದ ಮಿಲಿಟರಿ ಬುಧವಾರ ಬರೀ ನಕಲಿಯೆಂದು ಹೇಳಿದೆ. ಆದರೆ ವಿಡಿಯೊ ಚಿತ್ರಗಳು ನಕಲಿಯೇ ಅಥವಾ ಅಸಲಿಯೇ ಎನ್ನುವುದು ತನಿಖೆಯಿಂದ ಮಾತ್ರ ರುಜುವಾತಾಗಲಿದೆ.
ಬ್ರಿಟನ್ ಚಾನೆಲ್ 4 ಪ್ರಸಾರ ಮಾಡಿದ ವಿಡಿಯೋ ದೃಶ್ಯಗಳು ಭದ್ರತಾಪಡೆಗಳಿಗೆ ಕಳಂಕವುಂಟು ಮಾಡಲು ಹೆಣೆದ ನಕಲಿ ಚಿತ್ರವೆಂದು ಶ್ರೀಲಂಕಾ ಸೇನಾ ವಕ್ತಾರ ಬ್ರಿಗೇಡಿಯರ್ ಉದಯ ನಾನಯಕ್ಕರಾ ತಿಳಿಸಿದ್ದಾರೆ. ಸೇನಾಪಡೆಗಳ ಗೌರವ ಕುಂದಿಸಲು ಈ ವಿಡಿಯೊವನ್ನು ಕೃತಕವಾಗಿ ನಿರ್ಮಿಸಲಾಗಿದೆಯೆಂದು ನಾನಯಕ್ಕರಾ ತಿಳಿಸಿದರು. ಎಲ್‌ಟಿಟಿಇ ಉಗ್ರರು ಶ್ರೀಲಂಕಾದ ಮಿಲಿಟರಿ ಸಮವಸ್ತ್ರದಲ್ಲಿ ಕಾರ್ಯಾಚರಿಸುತ್ತಿದ್ದ ಸಂದರ್ಭದಲ್ಲಿ ಇದನ್ನು ಚಿತ್ರೀಕರಿಸಲಾಗಿದೆಯೆಂದು ಅವರು ನುಡಿದರು.
ತೀವ್ರ ಆಘಾತಕಾರಿ ವಿಡಿಯೊ ಚಿತ್ರದಲ್ಲಿ ಸೇನೆಯ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಕಣ್ಣಿಗೆ ಬಟ್ಟೆ ಕಟ್ಟಿದ ಬೆನ್ನು ತಿರುಗಿಸಿಕೊಂಡಿರುವ ನಗ್ನ ಪುರುಷನಿಗೆ ಅಮಾನವೀಯವಾಗಿ ಗುಂಡಿಕ್ಕುತ್ತಿರುವ ದೃಶ್ಯವನ್ನು ತೋರಿಸಲಾಗಿದ್ದು, ಕೆಸರಿನ ಗದ್ದೆಯಲ್ಲಿ ಇನ್ನೂ 8 ಮಂದಿಯ ಮೃತದೇಹಗಳು ಬಿದ್ದಿರುವುದನ್ನು ತೋರಿಸಿದೆ. ವಿಡಿಯೋದ ಕೊನೆಯ ದೃಶ್ಯದಲ್ಲಿ ಇದೇ ಮಾದರಿಯಲ್ಲಿ 10 ನೇ ವ್ಯಕ್ತಿಗೆ ಕೂಡ ಗುಂಡಿಕ್ಕಿ ಸಾಯಿಸಲಾಗಿದ್ದು, ಹಿನ್ನೆಲೆಯಲ್ಲಿದ್ದ ವ್ಯಕ್ತಿ ಹತ್ಯೆಗಳನ್ನು ಕಂಡು ಹಿರಿಹಿರಿ ಹಿಗ್ಗುತ್ತಿರುವ ನೋಟವಿದೆ.
ಶ್ರೀಲಂಕಾದ ಪ್ರಜಾಪ್ರಭುತ್ವ ಪರ ಪತ್ರಕರ್ತರ ಸಮೂಹದಿಂದ ಸ್ವೀಕರಿಸಿದ ವಿಡಿಯೊ ಸತ್ಯಾಸತ್ಯತೆ ಪರಿಶೀಲಿಸಲು ಸಾಧ್ಯವಾಗಿಲ್ಲವೆಂದು ಚಾನೆಲ್ 4 ತನ್ನ ವರದಿಯಲ್ಲಿ ತಿಳಿಸಿದೆ. ಮೊಬೈಲ್ ಫೋನ್ ಬಳಸಿಕೊಂಡು ಸೈನಿಕನೊಬ್ಬ ವಿಡಿಯೋ ಚಿತ್ರ ತೆಗೆದಿದ್ದನೆಂದು ಪತ್ರಕರ್ತರ ಸಮೂಹ ಹೇಳಿದೆ. ಸೈನಿಕರು ಎಲ್‌ಟಿಟಿಇ ವಿರುದ್ಧ ಹೋರಾಟ ಮಾಡಿದ್ದಾರೆಯೇ ಹೊರತು ಶ್ರೀಲಂಕಾ ತಮಿಳು ಸಮುದಾಯದ ವಿರುದ್ಧ ದೌರ್ಜನ್ಯಗಳಲ್ಲಿ ನಿರತವಾಗಿದ್ದನ್ನು ಲಂಡನ್‌ನಲ್ಲಿರುವ ಶ್ರೀಲಂಕಾ ಹೈಕಮೀಷನ್ ಹೇಳಿಕೆಯಲ್ಲಿ ನಿರಾಕರಿಸಿದೆ.