26/11 ಮುಂಬೈ ಭಯೋತ್ಪಾದನೆ ದಾಳಿಗಳನ್ನು ಕುರಿತ ಪ್ರಮುಖ ಸಾಕ್ಷ್ಯಾಧಾರ ಹೊಂದಿದ್ದ ಭಾರತ ಸಲ್ಲಿಸಿದ 6ನೇ ದಾಖಲೆಯನ್ನು ಪಾಕಿಸ್ತಾನ ತಳ್ಳಿಹಾಕಿದೆ. ಪಾಕಿಸ್ತಾನದ ನಿರ್ಧಾರವನ್ನು ಭಾರತ ದುರದೃಷ್ಟಕರವೆಂದು ಬಣ್ಣಿಸಿದೆ. ಮುಂಬೈ ದಾಳಿಗಳನ್ನು ಕುರಿತ ತನಿಖೆಗೆ ಇದು ದೊಡ್ಡ ಪೆಟ್ಟು ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದ ಕ್ರಮದಿಂದಾಗಿ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮುಕ್ತವಾಗಿ ತಿರುಗುವಂತಾಗಿದೆ. ವರದಿಗಾರರ ತಂಡದ ಜತೆ ಮಾತನಾಡುತ್ತಿದ್ದ ಕೃಷ್ಣ, ಮುಂಬೈ ದಾಳಿಗಳಿಗೆ ಕಾರಣಕರ್ತರನ್ನು ಪಾಕಿಸ್ತಾನ ನ್ಯಾಯದ ಕಟಕಟೆಗೆ ತರುತ್ತದೆಂದು ನಾವು ಭಾವಿಸಿದ್ದೆವು. ತಮ್ಮ ಮಾಹಿತಿಯಲ್ಲಿ ಪ್ರಸ್ತಾಪಿಸಿದ ಮುಂಬೈ ದಾಳಿಯ ಪಾತ್ರಧಾರಿಗಳ ಬಗ್ಗೆ ನಾವು ಸಾಕ್ಷ್ಯಾಧಾರ ನೀಡಿದ್ದೆವು. ಆದರೆ ಜಮಾತ್ ಉದ್ ದವಾ ಮುಖಂಡ ಹಫೀಜ್ ಸಯೀದ್ ವಿರುದ್ಧ ಇಂಟರ್‌ಪೋಲ್ ಕಟ್ಟೆಚ್ಚರದ ರೆಡ್ ಕಾರ್ನರ್ ನೋಟಿಸ್ ನೀಡಿದ ಬಳಿಕವೂ ಪಾಕಿಸ್ತಾನ ಮಾಹಿತಿಯನ್ನು ನಿರಾಕರಿಸಿದ್ದು ದುರದೃಷ್ಟಕರವೆಂದು ಕೃಷ್ಣ ಪ್ರತಿಕ್ರಿಯಿಸಿದ್ದಾರೆ.
ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ನೀಡಿದ್ದರಿಂದ ಸಯೀದ್‌ನನ್ನು ಬಂಧಿಸಿ, ಭಾರತಕ್ಕೆ ಹಸ್ತಾಂತರಿಸುವುದು ಪಾಕ್ ಸರ್ಕಾರದ ಕರ್ತವ್ಯವಾಗಿದೆ. ರೆಡ್ ಕಾರ್ನರ್ ನೋಟಿಸ್ ನೀಡಿದ್ದರಿಂದ ಅವನು ಪಾಕಿಸ್ತಾನದಲ್ಲಿ ಅಥವಾ ಎಲ್ಲೇ ಇರಲಿ, 26/11 ತನಿಖೆ ಕುರಿತು ಪಾಕ್ ಅಧಿಕಾರಿಗಳು ಅವರನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲು ಕಾನೂನುಬದ್ಧ ಕರ್ತವ್ಯ ಹೊಂದಿದ್ದಾರೆಂದು ಸಿಬಿಐ ವಕ್ತಾರ ಹರ್ಷ್ ಭಾಲ್ ತಿಳಿಸಿದ್ದಾರೆ.
ಭಾರತ ಸಲ್ಲಿಸಿದ ದಾಖಲೆ ಪಾಕ್ ನಿರಾಕರಿಸಿದ್ದರಿಂದ ತೀವ್ರ ನಿರಾಶೆ ವ್ಯಕ್ತಪಡಿಸಿದ ಎಸ್.ಎಂ. ಕೃಷ್ಣ, ಜಗತ್ತು ಈ ಬೆಳವಣಿಗೆಗಳನ್ನು ಗಮನಿಸಿದ್ದು, ಅವರದೇ ತೀರ್ಮಾನಕ್ಕೆ ಬರಬೇಕು ಎಂದು ಕೃಷ್ಣ ಹೇಳಿದ್ದಾರೆ.