ತಮ್ಮ ನಡುವೆ ಒಳಜಗಳ ತಡೆಗೆ ನಾಯಕತ್ವದ ಅಧಿಕಾರ ಹಂಚಿಕೆ ಸೂತ್ರವನ್ನು ಜಾರಿಗೆ ತರಲು ತಾಲಿಬಾನ್ ನಿರ್ಧರಿಸಿದೆ. ಪಾಕಿಸ್ತಾನದ ಮಿಲಿಟರಿ ವಾಜಿರಿಸ್ತಾನದ ತಾಲಿಬಾನ್ ಭದ್ರಕೋಟೆಗೆ ಮೇಲಿಂದ ಮೇಲೆ ಆಕ್ರಮಣ ನಡೆಸಿದ್ದರಿಂದ ತಾಲಿಬಾನ್ ಜರ್ಜರಿತವಾಗಿದೆ. ಜತೆಗೆ ತಾಲಿಬಾನಿನಲ್ಲಿರುವ ಒಳಜಗಳದಿಂದ ಅದು ಚೂರುಚೂರಾಗುವ ಹಂತ ತಲುಪಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಸೂತ್ರವನ್ನು ತಾಲಿಬಾನ್ ತಂದಿದೆ. ಈ ಸೂತ್ರದ ಪ್ರಕಾರ, ತೆಹ್ರೀಕಿ ತಾಲಿಬಾನ್ ಪಾಕಿಸ್ತಾನ(ಟಿಟಿಪಿ) ಮುಖಂಡನಾಗಿ 28 ವರ್ಷ ವಯಸ್ಸಿನ ಹಕೀಮುಲ್ಲಾ ಮೆಹ್ಸೂದ್ ಆಯ್ಕೆಯಾಗಿದ್ದಾನೆ. ತಾಲಿಬಾನಿನ ಇನ್ನೊಂದು ಬಣದ ಎದುರಾಳಿ ವಾಲಿ ಉರ್ ರೆಹ್ಮಾನ್, ಬೈತುಲ್ಲಾ ಅವಧಿಯಲ್ಲಿ ಮಾಡಿದಂತೆ ಸಂಘಟನೆಯ ವ್ಯವಹಾರ ನೋಡಲಿದ್ದಾನೆ.
ಇದರ ಅರ್ಥವೇನೆಂದರೆ ಮೆಹ್ಸೂದ್ ಕೇಂದ್ರ ಅಮೀರ್(ಮುಖ್ಯಸ್ಥ)ನೆನಿಸಿದರೂ ಅವನ ಇಡೀ ಮಾನವಶಕ್ತಿ ಮತ್ತು ಸಂಪನ್ಮೂಲಗಳ ನಿಯಂತ್ರಣ ವಾಲಿ ಉರ್ ರೆಹ್ಮಾನ್ ಕೈಯಲ್ಲಿರುತ್ತದೆ.ವಾಲಿ-ಯುರ್ ರೆಹ್ಮಾನ್ ದಕ್ಷಿಣ ವಜಿರಿಸ್ತಾನಕ್ಕೆ ಟಿಟಿಪಿ ಮುಖಂಡನಾಗುವ ಮೂಲಕ ಸಾಕಷ್ಟು ಅಧಿಕಾರ ಪಡೆದಿದ್ದರಿಂದ ತಾಲಿಬಾನಿನ ಒಳಜಗಳ ಸುಖಾಂತ್ಯ ಕಂಡಿದೆ.
ಕಳೆದ 20 ದಿನಗಳಿಂದ ತಾಲಿಬಾನ್ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯದ ಹೊಗೆ ದಟ್ಟವಾಗಿ ಹರಡಿ, ಬೈತುಲ್ಲಾ ಸಾವನ್ನು ಕೂಡ ತಾಲಿಬಾನ್ ಅಧಿಪತಿಗಳು ಅಲ್ಲಗಳೆದಿದ್ದರು. ಆದರೆ ಬೈತುಲ್ಲಾ ಸಜೀವವಾಗಿದ್ದನೆಂದು ರುಜುವಾತು ಮಾಡಲು ತಾಲಿಬಾನ್ ವಿಫಲವಾಗಿ ಅವನು ಸತ್ತಿದ್ದಾನೆಂದೂ ಕೊನೆಗೂ ಘೋಷಿಸಿತು.