ಲಷ್ಕರೆ ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಮುಂಬೈ ಭಯೋತ್ಪಾದನೆ ದಾಳಿಯ ರೂವಾರಿ ಲಕ್ವಿ ಅವರಿಬ್ಬರ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ ಬೆನ್ನಹಿಂದೆಯೇ ಝರಾರ್ ಶಾ ಮತ್ತು ಅಬು ಅಲ್ ಖಾಮಾ ವಿರುದ್ಧ ಕೂಡ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಝರಾರ್ ಶಾ ನಿಜವಾದ ಹೆಸರು ಅಬ್ದು ವಾಜಿದ್ ಎಂದಾಗಿದ್ದು, ಪಂಜಾಬ್ ಪ್ರಾಂತ್ಯದ ಶೀಖಾಪುರ ನಿವಾಸಿಯಾಗಿದ್ದಾನೆ.
ಅವನು ಲಷ್ಕರೆ ತೊಯ್ಬಾದ ತಾಂತ್ರಿಕ ವಿಭಾಗದ ನೇತೃತ್ವ ವಹಿಸಿದ್ದಾನೆ. 26/11 ಮುಂಬೈ ಭಯೋತ್ಪಾದಕರಿಗೆ ಉಪಗ್ರಹ ರೇಡಿಯೊ ಮೂಲಕ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದನೆಂದು ಅವನ ವಿರುದ್ಧ ಆರೋಪಿಸಲಾಗಿದೆ. ರೆಡ್ ಕಾರ್ನರ್ ನೋಟಿಸ್ ನೀಡಿರುವ ಇನ್ನೊಬ್ಬ ಆರೋಪಿ ಅಬು ಅಲ್ ಖಾಮಾ ನ.26ರಂದು ಮುಂಬೈಯನ್ನು ತಲ್ಲಣಗೊಳಿಸಿದ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದನೆಂದು ಆರೋಪಿಸಲಾಗಿದೆ.
ಭಯೋತ್ಪಾದಕರಿಗೆ ಮುಜಾಫರ್‌ಬಾದ್ ಶಿಬಿರದಲ್ಲಿ ಖಾಮಾ ತರಬೇತಿ ನೀಡುತ್ತಿದ್ದನೆಂದು ಹೇಳಲಾಗಿದೆ. ಅವನ ನೈಜ ಹೆಸರು ಮಜರ್ ಇಕ್ಬಾಲ್ ಎಂದಾಗಿದ್ದು, ಕೆಂಪು ಕೋಟೆಯ ಮೇಲೆ ದಾಳಿ, ಅಕ್ಷರಧಾಮ ಮಂದಿರದ ಮೇಲೆ ದಾಳಿ ಮತ್ತು ದೆಹಲಿಯಲ್ಲಿ ದಿವಾಳಿ ಸಂದರ್ಭದಲ್ಲಿ ಸರಣಿ ಬಾಂಬ್ ಸ್ಫೋಟಗಳಿಗೆ ಕಾರಣಕರ್ತನೆಂದು ಆಪಾದಿಸಲಾಗಿದೆ. ಇಂಟರ್‌ಪೋಲ್ ಇವರಿಬ್ಬರ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ನೀಡಿದ್ದರಿಂದ ಅವರು ಎಲ್ಲೇ ಇರಲಿ ಬಂಧಿಸಿ ಭಾರತಕ್ಕೆ ಹಸ್ತಾಂತರಿಸುವುದು ಪ್ರತಿಯೊಂದು ದೇಶದ ಕರ್ತವ್ಯವೆನಿಸಿದೆ.