ನಿದ್ರೆ ತಪ್ಪಿಸುವುದು, ಅವಮಾನದ ಏಟುಗಳು, ನೀರಿನಲ್ಲಿ ಮುಳುಗಿಸುವುದು ಮತ್ತು ವಾಲಿಂಗ್ ಅಥವಾ ಬಂಧಿತನ ತಲೆಯನ್ನು ಗೋಡೆಗೆ ಬಡಿಯುವುದು ಇವು ಸಿಐಎ ತನಿಖೆದಾರರು ಕೈದಿಗಳ ಬಾಯಿಬಿಡಿಸಲು ಬಳಸಿದ ವಿಧಾನಗಳು ಎಂದು ಸಿಐಎ ಏಜೆನ್ಸಿಯ ಟಿಪ್ಪಣಿ ತಿಳಿಸಿದೆ.
ಅಮೆರಿಕ ನ್ಯಾಯಾಂಗ ಇಲಾಖೆ ಕಾನೂನು ಮಂಡಳಿ ಕಚೇರಿಗೆ ಕಳಿಸಿದ ಟಿಪ್ಪಣಿಯನ್ನು ಅಮೆರಿಕದ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ನಾಗರಿಕ ಸ್ವಾತಂತ್ರ್ಯ ಸಂಘ ಸಲ್ಲಿಸಿದ ಮಾಹಿತಿ ಹಕ್ಕು ಕಾಯ್ದೆಯ ದಾವೆಯ ಅಡಿಯಲ್ಲಿ ಸೋಮವಾರ ಬಿಡುಗಡೆ ಮಾಡಲಾಯಿತು.ಸಿಐಎನಿಂದ ಕೈದಿಗಳ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸಲು ವಿಶೇಷ ಪ್ರಾಸಿಕ್ಯೂಟರ್‌ನ್ನು ಅಮೆರಿಕದ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ಸೋಮವಾರ ಹೆಸರಿಸಿದ್ದಾರೆ.
ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ ಸಿಐಎ ಸಿಬ್ಬಂದಿ ನಡೆಸಿದ ತನಿಖೆಯ ಅತಿರೇಕಗಳ ಬಗ್ಗೆ ಅವರ ವಿರುದ್ಧ ಕ್ರಮ ಜರುಗಿಸಬೇಕೆಂಬ ನ್ಯಾಯ ಇಲಾಖೆಯ ಕಾವಲುಸಮಿತಿ ಶಿಫಾರಸು ಮಾಡಿದ ಬಳಿಕ ಅವರ ನಿರ್ಧಾರ ಹೊರಬಿದ್ದಿದೆ.ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ ದಾಖಲೆಯಲ್ಲಿ ತನಿಖೆಗಿಂತ ಮುಂಚಿತವಾಗಿ ಬಂಧಿಗಳನ್ನು ವಿವಸ್ತ್ರಗೊಳಿಸಿ ಅವರನ್ನು ನಿದ್ರೆಯಿಂದ ವಿಮುಖಗೊಳಿಸಲು ನೆಟ್ಟಗೆ ನಿಂತಿರುವ ಸ್ಥಿತಿಯಲ್ಲಿ ಕೈಕೋಳ ಹಾಕಲಾಗಿತ್ತೆಂದು ತಿಳಿಸಿದೆ.
ಒಂದೊಮ್ಮೆ ತನಿಖೆ ಆರಂಭವಾಗುತ್ತಿದ್ದಂತೆ, ಅವಮಾನಪಡಿಸುವ ಕಪಾಳಮೋಕ್ಷದಿಂದ ಅವನಿಂದ ಸತ್ಯವನ್ನು ಹೆಕ್ಕಲಾಗುತ್ತದೆಯೆಂದು ಟಿಪ್ಪಣಿ ಹೇಳಿದೆ. ಬಂಧಿಗಳನ್ನು ದೈಹಿಕವಾಗಿ ಕುಂದಿಸಲು ಗೋಡೆಯನ್ನು ತಲೆಗೆ ಜಜ್ಜುವ ವಾಲಿಂಗ್ ವಿಧಾನವನ್ನು ಅನುಸರಿಸಲಾಗುತ್ತದೆ. ಪ್ರಮುಖ ಬಂಧಿಯನ್ನು ಒಂದು ಬಾರಿಗೆ ಗೋಡೆಗೆ ಬಡಿಯಬಹುದು ಅಥವಾ ಪ್ರಶ್ನೆಗೆ ಗಮನಾರ್ಹ ಉತ್ತರ ಬಯಸಲು ತಲೆಯನ್ನು 20 ರಿಂದ 30 ಬಾರಿ ಜಜ್ಜುತ್ತಿದ್ದರೆಂದು ದಾಖಲೆ ತಿಳಿಸಿದೆ.