ಅಮೆರಿಕದ ಡ್ರೋನ್ ದಾಳಿಯಲ್ಲಿ ತಮ್ಮ ಮುಖಂಡ ಬೈತುಲ್ಲಾ ಮೆಹ್ಸೂದ್ ಹತ್ಯೆಗೆ ಸೇಡುತೀರಿಸಿಕೊಳ್ಳುವುದಾಗಿ ಪಾಕಿಸ್ತಾನದ ತಾಲಿಬಾನ್ ಬೆದರಿಕೆ ಹಾಕಿರುವ ನಡುವೆ, ತಾಲಿಬಾನ್ ಹೊಸ ನಾಯಕತ್ವ ತನ್ನ ಶಕ್ತಿ ರುಜುವಾತು ಮಾಡಲು ದಾಳಿ ನಡೆಸುವ ಸಾಧ್ಯತೆಯಿದೆಯೆಂದು ತಜ್ಞರು ಎಚ್ಚರಿಸಿದ್ದಾರೆ.
ತೆಹ್ರೀಕ್ ಇ ತಾಲಿಬಾನ್ ಉಗ್ರಗಾಮಿ ಸಂಘಟನೆಗೆ ತಾನು ಹೊಸ ಮುಖಂಡ ಎಂದು ಹಕೀಮುಲ್ಲಾ ಮೆಹ್ಸೂದ್ ಮಂಗಳವಾರ ತಡವಾಗಿ ಘೋಷಿಸಿಕೊಂಡಿದ್ದು, ಬೈತುಲ್ಲಾ ಮೆಹ್ಸೂದ್ ಸತ್ತಿದ್ದಾನೆಂದು ಮೊಟ್ಟ ಮೊದಲ ಬಾರಿಗೆ ದೃಢಪಡಿಸಿದ್ದಾನೆ.ಬೈತುಲ್ಲಾ ಮೆಹ್ಸೂದ್ ಡ್ರೋನ್ ದಾಳಿಯಲ್ಲಿ ಸತ್ತಿದ್ದಾನೆಂದು ಪಾಕಿಸ್ತಾನ ಮತ್ತು ಅಮೆರಿಕ ಅಧಿಕಾರಿಗಳು ಹೇಳಿದ್ದರು. ಆದರೆ ತಾಲಿಬಾನಿಗಳು ತಮ್ಮ ನಾಯಕ ಕೇವಲ ಅಸ್ವಸ್ಥನಾಗಿದ್ದಾನೆಂದು ಹೇಳುತ್ತಿದ್ದರು.
ಡ್ರೋನ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಅವನು ಪ್ರಜ್ಞೆ ತಪ್ಪಿದ್ದು, ಭಾನುವಾರ ಸತ್ತಿದ್ದಾನೆಂದು ಹಕೀಮುಲ್ಲಾ ಹೇಳಿದ್ದಾನೆ. ತಾಲಿಬಾನ್ ಸಾರಥ್ಯಕ್ಕೆ ಇನ್ನೊಬ್ಬ ಎದುರಾಳಿಯಾಗಿದ್ದ ವಾಲಿ ಉರ್ ರೆಹ್ಮಾನ್ ತನ್ನ ಎದುರಾಳಿಯ ವಾದವನ್ನು ಬೆಂಬಲಿಸಿದ್ದು, ಉಗ್ರಗಾಮಿ ಭದ್ರಕೋಟೆ ದಕ್ಷಿಣ ವಜಿರಿಸ್ತಾನದಲ್ಲಿ ತಾನು ನಾಯಕನಾಗಿ ನೇಮಕವಾಗಿದ್ದಾಗಿ ಹೇಳಿದ್ದಾನೆ.