ಸಿಯುಡಾಡ್ ಜಾರೆಜ್, ಗುರುವಾರ, 27 ಆಗಸ್ಟ್ 2009( 12:16 IST )
ಬಂದೂಕುಧಾರಿಗಳು ಮೆಕ್ಸಿಕೊದ ಗಡಿ ಜಿಲ್ಲೆ ಸಿಡಾಡ್ ಜಾರೆಜ್‌ನಲ್ಲಿ ಏಳು ಪ್ರತ್ಯೇಕ ಘಟನೆಗಳಲ್ಲಿ ಮನಬಂದಂತೆ ಗುಂಡುಹಾರಿಸಿದ್ದರಿಂದ ಸುಮಾರು 13 ಜನರು ಬುಧವಾರ ಬಲಿಯಾಗಿದ್ದಾರೆ. ಟೆಕ್ಸಾಸ್ ಎಲ್ ಪಾಸೊ ಗಡಿಯಲ್ಲಿ ಬಂದೂಕುಧಾರಿಗಳು ಮಂಗಳವಾರ ನಾಲ್ಕು ಪ್ರತ್ಯೇಕ ದಾಳಿಗಳಲ್ಲಿ 6 ಜನರಿಗೆ ಗುಂಡಿಕ್ಕಿ ಕೊಂದಿದ್ದಾರೆ. ಇಬ್ಬರು ದುರ್ದೈವಿಗಳಿಗೆ ಕಾರಿನೊಳಕ್ಕೆ ಗುಂಡಿಕ್ಕಿ ಕೊಲ್ಲಲಾಗಿದೆಯೆಂದು ತನಿಖೆದಾರರು ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನೊಬ್ಬ ದುರ್ದೈವಿ ವಿಸಿಂಟೆ ಲಿಯೋನ್ ಮುಂಜಾನೆ ಟಾಕೊ ನಿಲ್ದಾಣದಲ್ಲಿ ಸತ್ತಿದ್ದಾನೆ. ಲಿಯೋನ್ ತನ್ನ ಪೋಷಕರು ಮತ್ತು 13 ವರ್ಷ ವಯಸ್ಸಿನ ಸೋದರನನ್ನು ಇಬ್ಬರು ಹೈಸ್ಕೂಲ್ ಸ್ನೇಹಿತರ ನೆರವಿನಿಂದ ಹತ್ಯೆ ಮಾಡಿದ ಘಟನೆ ಸಾರ್ವಜನಿಕ ಗಮನ ಸೆಳೆದಿತ್ತು. ಕೆಲವು ಗಂಟೆಗಳ ಬಳಿಕ, ದುಷ್ಕರ್ಮಿಗಳು 16ರಿಂದ 20ರ ವಯೋಮಾನದ ಐವರನ್ನು ಮನೆಯೊಂದರ ಹೊರಗೆ ಕೊಂದಿದ್ದಾರೆಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ಮೂವರು ಸತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇವೆಲ್ಲ ಹತ್ಯೆಗಳು ಸಂಘಟಿತ ಅಪರಾಧವನ್ನು ಹೋಲುತ್ತಿದ್ದು, ಹತ್ಯೆಗಳಿಗೆ ಪ್ರೇರಣೆ ಅಥವಾ ಶಂಕಿತರ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ ಮತ್ತು ಯಾರನ್ನೂ ಬಂಧಿಸಲಾಗಿಲ್ಲ.