ಕೋರ್ಟ್‌ರೂಂನಲ್ಲಿ ಮುಖವನ್ನು ಮುಚ್ಚುವ ಬುರ್ಖಾ ತೆಗೆಯುವಂತೆ ಸೂಚಿಸಿದ ಮಿಚಿಗನ್ ನ್ಯಾಯಾಧೀಶರ ಮೇಲೆಯೇ ಮುಸ್ಲಿಂ ಮಹಿಳೆಯೊಬ್ಬರು ದಾವೆ ಹೂಡಿದ್ದು, ತನ್ನ ಧರ್ಮವನ್ನು ಆಚರಿಸುವ ಸಂವಿಧಾನಿಕ ಹಕ್ಕಿಗೆ ಚ್ಯುತಿ ತಂದಿದ್ದಾರೆಂದು ವಾದಿಸಿದ್ದಾರೆ. 32ರ ಪ್ರಾಯದ ರಾನೀನ್ ಅಲ್ಬಾಗ್‌ಡಾಡಿಗೆ ವಿಚಾರಣೆ ಸಂದರ್ಭದಲ್ಲಿ ವಾಯ್ನೆ ಕೌಂಟಿ ಸರ್ಕ್ಯೂಟ್ ನ್ಯಾಯಾಧೀಶ ವಿಲಿಯಂ ಕಲ್ಲಾಹನ್ ಬುರ್ಖಾ ತೆಗೆಯುವಂತೆ ಸೂಚಿಸಿದಾಗ ತೀವ್ರ ಅವಮಾನಿತರಾಗಿದ್ದಾಗಿ ಅಲ್ಬಾಗ್‌ಡಾಡಿ ತಿಳಿಸಿದ್ದಾರೆ.
ಇದೊಂದು ಸ್ವತಂತ್ರ ರಾಷ್ಟ್ರವಾಗಿದ್ದು, ಕೇವಲ ಬುರ್ಖಾ ಹಾಕಿದ್ದಕ್ಕೆ ಆರೀತಿ ನಡೆಸಿಕೊಳ್ಳಬಾರದು ಎಂದು ಅಮೆರಿಕ-ಇಸ್ಲಾಮಿಕ್ ಸಂಬಂಧದ ಮಂಡಳಿಯ ಸೌತ್‌ಫೀಲ್ಡ್ ಮುಖ್ಯಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಿಳೆ ತಿಳಿಸಿದ್ದಾರೆ.
ಕಾಲಹಾನ್ ಮತ್ತು ವಾಯ್ನೆ ಕೌಂಟಿ ವಿರುದ್ಧ ಫೆಡರಲ್ ದಾವೆಯಲ್ಲಿ ಮಂಡಳಿಯು ಅಲ್ಬಾಗ್‌ಡಾಡಿಗೆ ಒತ್ತಾಸೆಯಾಗಿ ನಿಂತಿದೆ. ಆದರೆ ಜಡ್ಜ್ ಕಲ್ಲಾಹಾನ್ ವಾದವೇ ಬೇರೆ ರೀತಿಯಲ್ಲಿದೆ. ಇರಾನ್ ನಿವಾಸಿ ಅಲ್ಬಾಗ್‌ಡಾಡಿ ಬುರ್ಖಾವನ್ನು ಯಾವುದೇ ಪ್ರತಿಭಟನೆಯಿಲ್ಲದೇ ತೆಗೆದರು. ಅದರ ಧಾರ್ಮಿಕ ಮಹತ್ವವನ್ನು ವಿವರಿಸಿದ್ದರೆ ಅದನ್ನು ಧರಿಸಲು ತಾನು ಅನುಮತಿ ನೀಡುತ್ತಿದ್ದೆಂದು ಸಮರ್ಥಿಸಿಕೊಂಡಿದ್ದಾರೆ.